facebook

ಯುದ್ಧ ಕಾಲೇ ಶಸ್ತ್ರಾಭ್ಯಾಸ!!

 

#ಮಕ್ಕಳಕಥೆ

ಈ ಕಥೆ, ಶಾಲೆಗೆ ಹೋಗುತ್ತಿರುವ ಈಗಿನ ಚಿಕ್ಕ ಮಕ್ಕಳಿಗೆ ಮಾತ್ರ!

ಒಂದೂರಿನಲ್ಲಿ ಒಬ್ಬಳು ಪುಟ್ಟ ಹುಡುಗಿ ಇದ್ದಳು. ಅವಳ ಹೆಸರು ರಾಣಿ. ರಾಣಿ ತುಂಬಾ ಒಳ್ಳೆಯ ಹುಡುಗಿ. ಆದರೆ ಸ್ವಲ್ಪ ತುಂಟಿ! ಅಮ್ಮ ಕೊಡುವ ತರಕಾರಿ, ಹಣ್ಣು, ಮೊಟ್ಟೆ, ಹೀಗೆ ಒಳ್ಳೆಯ ಆಹಾರವನ್ನು ತಿಂದು ಆರೋಗ್ಯವಾಗಿ ಇದ್ಲು. ಊಟದ ವಿಷಯದಲ್ಲಿ ಎಲ್ಲಾರಿಂದಲೂ ‘ಗುಡ್ ಗರ್ಲ್’ ಎಂಬ ಬಿರುದನ್ನು ತೆಗೆದುಕೊಂಡಿದ್ದಳು. ಅಪ್ಪ, ಅಮ್ಮ ಮತ್ತು ಟೀಚರ್ ಅಂದ್ರೆ ತುಂಬಾನೆ ಗೌರವ. ಅವರಿಗೂ ಅಷ್ಟೇ, ಇವಳನ್ನ ಕಂಡ್ರೆ ತುಂಬಾ ಇಷ್ಟ. ಆದರೆ ರಾಣಿಗೆ ಯಾವಾಗ್ಲೂ ಆಡೋದು ಅಂದ್ರೆ ಇಷ್ಟ. ಸಂಜೆ ಸ್ಕೂಲಿಂದ ಬಂದು ಹಾಲು ಕುಡಿದು, ಬಟ್ಟೆ ಬದಲಾಯಿಸಿ, ಮುಖ ತೊಳೆದು, ಆಚೆ ಆಟ ಆಡೋದಕ್ಕೆ ಹೋದರೆ, ಸುಸ್ತಾಗಿ ಬಂದು ಊಟ ಮಾಡಿ ಮಲಗೋದು! ಪುನಃ ಬೆಳಿಗ್ಗೆ ಎದ್ದು ಸಿದ್ಧವಾಗಿ ಶಾಲೆಗೆ ಹೋಗುವುದು. ಇನ್ನು ರಜಾ ಬಂದ್ರು ಅಷ್ಟೇ!  ಆಟ, ಟಿವಿ ಹೀಗೆ ಅವಳ ದಿನಚರಿ. ದಿನ ಓದೋದು ಅಂದ್ರೆ ಅವಳಿಗೆ ಆಲಸ್ಯ. ಪರೀಕ್ಷೆ ದಿನ ಮಾತ್ರ ಓದೋದು. ಅದು ಕಷ್ಟ ಪಟ್ಟು! ಎಲ್ಲ ಒಟ್ಟಿಗೆ ಓದೋಕೆ ಆಗದೆ ಕಷ್ಟ ಆಗಿ, ನಿದ್ದೆ ಬಂದು ಅತ್ತು, ಅಮ್ಮನ ಮೇಲೆ ರೇಗಾಡಿ ಮಲ್ಕೊತಾಳೆ! ಹಾಗಾಗಿ ಅವಳು ಬುದ್ಧಿವಂತೆಯಾದರೂ ಪರೀಕ್ಷೆಯಲ್ಲಿ ಅಂಕಗಳು ಯಾವಾಗಲೂ ಕಡಿಮೆ!

 

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ, ಪರೀಕ್ಷೆಯ ದಿನ ಎಲ್ಲವನ್ನು ಒಟ್ಟಿಗೆ ಓದಲು ಹೋಗದೆ, ಪರೀಕ್ಷೆಗೆ ಮುಂಚಿತವಾಗಿಯೇ, ಶಾಲಾ ಆರಂಭ ದಿನಗಳಿಂದಲೂ ಪ್ರತಿ ನಿತ್ಯ ಅಂದಿನ ಪಾಠವನ್ನು ಅಂದೇ ಶಾಲೆ ಮುಗಿದ ನಂತರ ಅಭ್ಯಾಸ ಮಾಡಬೇಕು ಎಂದು ಅವಳ ಅಮ್ಮ ಅಪ್ಪ ಇಬ್ಬರೂ ಎಷ್ಟೋ ಬಾರಿ ಹೇಳಿದರೂ, ಅವಳಿಗೆ ಅರ್ಥವಾಗಲಿಲ್ಲ. ಕೋಪಗೊಂಡು ಮುನಿಸಿಕೊಂಡಳೇ ವಿನಹಃ, ಪ್ರತಿ ದಿನ ಓದುವುದನ್ನು ಅಭ್ಯಾಸ ಮಾಡಿಕೊಳ್ಳಲಿಲ್ಲ.

 

ಆಗ ಅವಳ ಅಪ್ಪ ಅಮ್ಮ ಇಬ್ಬರೂ, ಇವಳು ಇನ್ನೂ ಪುಟ್ಟ ಹುಡುಗಿ. ಇವಳಿಗೆ ಹೀಗೆ ಬುದ್ಧಿಮಾತು ಹೇಳಿದರೆ ಅರ್ಥವಾಗುವುದಿಲ್ಲ ಆದ್ದರಿಂದ ಅವಳಿಗೆ ಸರಿಯಾಗಿ ಅರ್ಥವಾಗುವಂತೆ, ನಾವು ತಿಳಿಸಿ ಹೇಳಬೇಕು ಎಂದು ಉಪಾಯ ಒಂದನ್ನು ಮಾಡಿದರು.

 

ರಾತ್ರಿ ಊಟಕ್ಕೆ ಬಂದ ರಾಣಿಗೆ, ಅಮ್ಮ ೧೦ ಚಪಾತಿ ರೋಲ್ಸ್ ತಟ್ಟೆಗೆ ಹಾಕಿ ತಿನ್ನು ಎಂದು ಕೊಟ್ಟರು. ಅದನ್ನು ನೋಡಿದ ರಾಣಿಯ ಮುಖ ಸಂತೋಷದಿಂದ ಅರಳಿತು. ಏಕೆಂದರೆ ಅವಳಿಗೆ ರೋಲ್ಸ್ ಅಂದ್ರೆ ತುಂಬಾ ಇಷ್ಟ. ‘ಅಮ್ಮ!! ನನ್ ಇಷ್ಟವಾದ ಚಪಾತಿ ರೋಲ್ಸ್!’,ಎಂದು ಕುಣಿದಳು. ಆಗ ಅಮ್ಮ,’ಹೌದು, ನಿನಗೆ ೧೦ ರೋಲ್ಸ್ ಕೊಟ್ಟಿದ್ದೀನಿ. ಮುಂದಿನ ೫ ದಿನದ ರಾತ್ರಿ ಊಟ ಅದು. ಇವತ್ತೇ ಈಗಲೇ ತಿನ್ನು!’,ಎಂದರು. ಆಗ ರಾಣಿ ನಗಲು ಶುರು ಮಾಡಿದಳು. ‘ಅಮ್ಮ ನಿಂಗೆ ಅಷ್ಟು ಗೊತ್ತಾಗಲ್ವಾ. ಯಾರಾದ್ರೂ ಒಟ್ಟಿಗೆ, ಒಂದೇ ದಿನ ಇಷ್ಟು ತಿನ್ನೋಕೆ ಆಗುತ್ತಾ? ಅದೂ ೫ ದಿನದ್ದೂ, ಒಂದೇ ದಿನಾ?!! ರೋಲ್ಸ್ ಇಷ್ಟ ಆದ್ರೆ ಒಂದೇ ದಿನಕ್ಕೆ ಇಷ್ಟು ತಿನ್ನೋದು ಕಷ್ಟ. ವಾಂತಿ ಆಗುತ್ತೆ ಅಷ್ಟೇ!’,ಅಂದಳು. ಆಗ ತಕ್ಷಣ ಅಮ್ಮ ,’ಓದೋದು ಹಾಗೆ ರಾಣಿ ಪುಟ್ಟಿ. ಪರೀಕ್ಷೆಯ ದಿನ, ಆ ಒಂದೇ ದಿನ ಇಡೀ ವರ್ಷದ್ದು ಓದೋದಿಕ್ಕೆ ಕಷ್ಟ ಆಗುತ್ತೆ!! ಹಾಗೆ ಓದಲೇ ಬಾರದು. ಈಗ ನೋಡು ನಿನಗೆ ಇಷ್ಟವಾದದ್ದೆ ಕೊಟ್ಟರೂ, ಒಟ್ಟಿಗೆ ಹೆಚ್ಚು ತಿನ್ನಲು ಕಷ್ಟ! ವಾಂತಿಯಾಗುತ್ತೆ ಅಂದೆ. ಇನ್ನು ಓದೋದು ಯಾವ ಮಕ್ಕಳಿಗೂ ಅಷ್ಟು ಇಷ್ಟವಾಗೊಲ್ಲ! ಹಾಗಾಗಿ ಪರೀಕ್ಷೆ ಸಮಯದಲ್ಲಿ ಎಲ್ಲವನ್ನು ಒಟ್ಟಿಗೆ ಓದಲು ಹೋದಾಗ ನಿನಗೆ ತಲೆನೋವು ಬರುತ್ತೆ. ಓದಲಾಗದೆ ಪರೀಕ್ಷೆಯಲ್ಲಿ ಸರಿಯಾಗಿ ಬರೆಯದೆ ಬರುತ್ತೀಯ!’, ಎಂದರು.

 

ಈಗ ರಾಣಿಯ ತಲೆಗೆ ಎಲ್ಲಾ ಅರ್ಥವಾಯಿತು. ‘ಆಯ್ತು ಅಮ್ಮ. ನೀವು ಹೇಳಿದ ಹಾಗೆ ನಾನು ಶಾಲೆಯಿಂದ ಬಂದು ಆ ದಿನದ ಪಾಠವನ್ನು ಅಂದೇ ಅಭ್ಯಾಸ ಮಾಡಿ, ಆಮೇಲೆ ಆಡೋದಿಕ್ಕೆ ಹೋಗುತ್ತೇನೆ. ಆಗ ಪರೀಕ್ಷೆ ಬಂದಾಗ ಎಲ್ಲವನ್ನು ಒಟ್ಟಿಗೆ ಓದೋದು ತಪ್ಪುತ್ತದೆ’, ಎಂದಳು. ಅದರಂತೆ ರಾಣಿ, ಪ್ರತಿದಿನ ಅಭ್ಯಾಸ ಮಾಡಿದಳು. ಹಾಗಾಗಿ ಪರೀಕ್ಷೆಯ ದಿನ ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದುವಂತಾಯಿತು. ಹೆಚ್ಚು ತಲೆ ಬಿಸಿ ಇಲ್ಲದೆ, ಓದಿದ್ದನ್ನೆಲ್ಲ ಒಮ್ಮೆ ಕಣ್ಣಾಡಿಸಿ, ಪುನರಾವರ್ತಿಸಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು, ಒಳ್ಳೆಯ ಅಂಕಗಳನ್ನು ಪಡೆದವರಲ್ಲಿ ಅವಳೂ ಒಬ್ಬಳಾದಳು.

 

ನೀತಿ: ಆ ದಿನದ ಪಾಠವನ್ನು ಅಂದೇ ಅಭ್ಯಾಸ ಮಾಡಿ.

Leave a Reply

Your email address will not be published. Required fields are marked *