ದಿನಕ್ಕೊಂದು ಬ್ಲಾಗ್_Momspresso
Feb 2021
Topic:#ನಿಮ್ಮ ವ್ಯಾಲೆಂಟಿನ್ ಗೆಳೆಯನೇ ಆಗಬೇಕೆಂದಿಲ್ಲ
ನೀವು ಪ್ರೀತಿಯಲ್ಲಿ ಮುಳುಗಿರುವವರನ್ನು ನೋಡಿದ್ದೀರಾ? ಅವರ ಮುಖದಲ್ಲಿ ಒಂದು ತರಾ ಹೊಳಪು ತೇಜಸ್ಸು ಇರುತ್ತದೆ. ಗಮನಿಸಿ ನೋಡಿ ಒಮ್ಮೆ!
ಸದಾ ಖುಷಿಯಿಂದ ಲವಲವಿಕೆಯಿಂದ ಇರುತ್ತಾರೆ.
ಇನ್ನೊಬ್ಬರನ್ನು ಪ್ರೀತಿಸಿದಾಗ ಅಥವಾ ಇನ್ನೊಬ್ಬರ ಪ್ರೀತಿಯಲ್ಲಿ ನಾವು ಬಿದ್ದಾಗ ಹೀಗೆಲ್ಲಾ ಒಳ್ಳೆಯ ಅನುಭವ ಆಗುತ್ತದೆ ಎಂದಾದರೆ, ನಮ್ಮನ್ನು ನಾವೇ ಪ್ರೀತಿಸಿದರೆ ಹೇಗಿರುತ್ತದೆ!?
ಮೇಲೆ ಹೇಳಿದ, ಹೊಳಪು ತೇಜಸ್ಸು ಖುಷಿ ಎಲ್ಲಾ ಇಮ್ಮಡಿಯಾಗಬಹುದಲ್ಲವೇ!?
ಅದಕ್ಕೆ ಈ ವರ್ಷ ನನಗೆ ನಾನೇ ವ್ಯಾಲೆಂಟಿನ್!
ಸ್ವಾರ್ಥಿ ಎನಿಸುತ್ತಿದೆಯೆ?!
ನನಗೂ ಈ ಯೋಚನೆ ಬಂದಾಗ, ನಾನು ಸ್ವಾರ್ಥಿಯೆ, ಪ್ರಪಂಚ ಸ್ವಾರ್ಥಿ ಎನ್ನಬಹುದೇ ಎಂದೆನಿಸಿತ್ತು.
ಆದರೆ ಯೋಚಿಸಿ ಹೇಳಿ,
ನೀವು ಸದಾ ಬೇರೊಬ್ಬರ ಬಗ್ಗೆಯೇ ಯೋಚಿಸುತ್ತಾ, ಪ್ರೀತಿಸುತ್ತಾ, ಜೀವಿಸುತ್ತಾ ಬಂದಿರುವಿರಲ್ಲಾ, ನಿಮ್ಮನ್ನೇ ಮರೆತು, ಅದು ಸರಿಯೇ?! ನಮಗೆ ನೊಬೆಲ್/ಆಸ್ಕರ್ ಕೊಟ್ಟಿದ್ದಾರೆಯೇ?! ನಮ್ಮನ್ನು ಮರೆತು, ಇನ್ನೊಬ್ಬರ ಸೇವೆಯಲ್ಲಿರುವುದಕ್ಕೆ, ಇಲ್ಲ ತಾನೇ!?
ಹಾಗೆ, ನನ್ನ ಮನಸ್ಸು ಕೂಡ ಹೇಳಿತು ತಲೆಕೆಡಿಸಿಕೊಳ್ಳಬೇಡ, ನಿನ್ನನ್ನು ನೀನು ಪ್ರೀತಿಸಲು, ಖುಷಿ ಪಡಿಸಲು ಕಲಿ ಎಂದು, ಬೇರೆಯವರನ್ನು ಪ್ರೀತಿಸುವುದರ ಜೊತೆ.
ಆದರೆ, ಅದು ಹೇಗೆ?
ಅದು ಹೀಗೆ……!
ನಿಮ್ಮಂತೆ ನಾನು ಸಂಸಾರ, ನೌಕರಿ ಜಂಜಾಟದಲ್ಲಿ ಮುಳುಗಿಹೋಗಿದ್ದೆ. ನನ್ನನ್ನು ನಾನೇ ಮರೆತು ಹೋಗಿದ್ದೆ.
ಒಮ್ಮೆ ತುಂಬಾ ಬೇಸರದಲ್ಲಿದ್ದಾಗ, ಅದನ್ನು ಹೋಗಲಾಡಿಸಲು ನಿನಗೆ ಇಷ್ಟವಾದದ್ದನ್ನು ಮಾಡು ಎಂದು ಒಬ್ಬರು ಸಲಹೆ ನೀಡಿದರು. ನನಗೆ ನಾನೇ ಕೇಳಿಕೊಂಡೆ?! ನನಗೆ ಏನು ಇಷ್ಟ, ಯಾವುದನ್ನು ಕಂಡರೆ ತುಂಬಾ ಪ್ರೀತಿ ಎಂದು! ಉತ್ತರ ಗೊತ್ತಿಲ್ಲದೆ ತಬ್ಬಿಬ್ಬಾದೆ!
ಗಂಡ?ಮಕ್ಕಳು? ನೌಕರಿ?? ಅವರ ನೋಡಿಕೊಳ್ಳುವುದು?
ಇಲ್ಲ, ಉತ್ತರ ಅದಲ್ಲ!
ಅವರೆಲ್ಲರ ಮೇಲೆ ತುಂಬಾ ಪ್ರೀತಿಯಿದೆ. ಆದರೆ ಅವರೆಲ್ಲಾ ಈಗ ಬಂದವರು. ಮದುವೆ ಮಕ್ಕಳಾಗುವ ಮುಂದೆ ನಾನು ನಾನಾಗಿದ್ದೆ. ನನ್ನದೇ ಆದ ಹವ್ಯಾಸಗಳು, ನನ್ನ ಇಷ್ಟಕಷ್ಟಗಳು ಇದ್ದವು. ಆದರೆ ಎಷ್ಟೋ ವಿಷಯಗಳು ಓದಿನ ಕಾರಣ ಅಲ್ಲೇ ನಿಂತವು. ನಂತರ ಮದುವೆ, ಮಕ್ಕಳು ಹೀಗೆ ನೆಪಗಳು.
ಈ ಮಧ್ಯೆ ಬುದ್ಧನಿಗೆ ಜ್ಞಾನೋದಯವಾದಂತೆ ನನಗೂ ಆಯಿತು. ತಿಳಿಯಿತು ನನಗೆ, ಯಾರು ಬಂದು ಹೇಳುವುದಿಲ್ಲ ನನಗೆ, ನಿನ್ನ ಇಷ್ಟ ಬಂದದ್ದನ್ನು ಮಾಡು ಎಂದು. ನನಗೆ ನಾನೇ ಪ್ರೊತ್ಸಾಹಿಸಿಕೊಂಡು ಮುನ್ನಡೆಯಬೇಕೆಂದು. ಇನ್ನೂ ತಡ ಮಾಡಿದರೆ ಆಯುಸ್ಸು ಮುಗಿದುಹೋಗಿರುತ್ತದೆ. ನನ್ನ ಆಸೆಗಳೆಲ್ಲಾ ಪೂರೈಸಿಕೊಳ್ಳಲಾಗದೆ ಪ್ರೇತಾತ್ಮವಾಗಿ ಅಲೆಯಬೇಕಾಗುತ್ತದೆ ಎಂದು!!!!
ಸರಿ, ಅಲ್ಲಿಂದ ಶುರುವಾಯಿತು ಹಳೆ ಪೆಟ್ಟಿಗೆಯೊಳಗೆ ಹುಗಿದಿಟ್ಟಿದ್ದ ಎಲ್ಲಾ ಇಷ್ಟಗಳಿಗೂ ಧೂಳು ಹೊಡೆಯುವ ಕೆಲಸ, ನನ್ನ ಖುಷಿಗಾಗಿ, ನನ್ನನ್ನು ನಾ ಪ್ರೀತಿಸುವುದರ ಒಂದು ಭಾಗವಾಗಿ.
ಸಂಗೀತ ಕಲಿಯುವುದು, ವೀಣೆ ನುಡಿಸುವುದು, ರಂಗೋಲಿ ಹಾಕುವುದು, ಕಥೆ ಕವನ ಬರೆಯುವುದು ಒಟ್ಟಿನಲ್ಲಿ ಮನಸ್ಸಿಗೆ ಖುಷಿ ಕೊಡುವಂತಹುದ್ದು! ಎಲ್ಲವನ್ನು ಮುಂಚೆಯೇ ಕಲಿತಿರಲಿಲ್ಲ. ಯಾವುದರಲ್ಲಿಯೂ ಪರಿಣಿತಿ ಹೊಂದಿರಲಿಲ್ಲ. ಆದರೆ ಶುರು ಮಾಡಿದೆ!
ಸರಿ ಇಷ್ಟೆಲ್ಲಾ ಮಾಡುವುದಕ್ಕೆ ಸಮಯ ಎಲ್ಲಿ ಸಿಗುತ್ತದೆ?! ಎರಡು ಸಣ್ಣ ಮಕ್ಕಳ ತಾಯಿಯಾಗಿ.
ಮನಸ್ಸಿದ್ದರೆ ಮಾರ್ಗ. ಅಷ್ಟೇ!
ಬೆಳಿಗ್ಗೆಯಿಂದ ರಾತ್ರಿಯವರೆಗೆ ‘ಬೇರೆ’ ಯವರ ಕೆಲಸಗಳೇ ಆಗುತ್ತವೆ.ರಾತ್ರಿಯ ನಂತರ ‘ನನ್ನ’ ಕೆಲಸಗಳು ಶುರುವಾಗುತ್ತದೆ… ನನ್ನ ನಾ ಪ್ರೀತಿಸುವ ಕೆಲಸ…..ನನ್ನ ನಾ ಖುಷಿ ಪಡಿಸುವ ಕೆಲಸ!ಪ್ರೇಮಿಗಳು ಅವರ ಪ್ರೇಮಿಯನ್ನು ನೋಡಲೊ, ತಿನ್ನಿಸಲೊ, ತಿರುಗಾಡಿಸಲೊ ಸಮಯ ಮಾಡಿಕೊಳ್ಳು ವುದಿಲ್ಲವೇ ಹಾಗೆ. ನಮ್ಮೊಳಗಿನ ನಮ್ಮ ಪ್ರೇಮಿಗೆ ನಾವು ಸಮಯ ಕೊಡಬೇಕು.
ಅಷ್ಟೇ ಅಲ್ಲ, ನನಗೆ ಖುಷಿಯಾಗುವಂತಹುದು ಒಳ್ಳೆಯದಾಗುವಂತಹುದು ಎಲ್ಲವನ್ನು ನಾನು ಮಾಡುತ್ತೇನೆ, ಅಂದರೆ ನನಗೆ ಬೇಕಾದ ಹಾಗೆ ಸಿಂಗರಿಸಿಕೊಳ್ಳುವುದು, ಚೆಂದದ ಉಡುಗೆ ತೊಡುವುದು,ಎಲ್ಲೂ ಹೋಗದಿದ್ದರೂ ಪರವಾಗಿಲ್ಲ, ಯಾರೂ ನೋಡದಿದ್ದರೂ ಪರವಾಗಿಲ್ಲ! ನನ್ನ ಮನಸ್ಸಿನ ಖುಷಿಗೆ. ಹಾಗೆ ಇಷ್ಟವಾದ ವಿಂಡೋ ಶಾಪಿಂಗ್ ಮಾಡ್ತಿನಿ. ಮೂವಿ ನೋಡ್ತೀನಿ, ಅಪರೂಪಕ್ಕೆ ಇಷ್ಟದ ಊಟ ಹೋಟೆಲ್ನಿಂದ ಆರ್ಡರ್ ಮಾಡುತ್ತೇನೆ. ದಿನಾ ಬೇಯಿಸಿ ಬೇಯಿಸಿ ಸಾಕಾಗಿರುತ್ತದೆ ಅಲ್ಲವೇ. ಅದಕ್ಕೆ ಬ್ರೇಕ್ ತೆಗೆದುಕೊಳ್ಳುತ್ತೇನೆ!!
ನಾಲ್ಕು ಜನ ಹಳೆ ಸ್ನೇಹಿತರಿಗೆ ಕಾಲ್ ಮಾಡಿ ಮಾತಾಡುತ್ತೇನೆ. ಅವರ ಕಷ್ಟ ಸುಖ ಕೇಳಿ, ನನ್ನದು ಹೇಳುತ್ತೇನೆ.ಕೆಲಸ ಮಾಡುವಾಗ ಹಾಡು ಕೇಳಿ ಖುಷಿ ಪಡುತ್ತೇನೆ. ಹೀಗೆ, ನನ್ನನ್ನು ನಾನೇ ಮುದ್ದು ಮಾಡಿಕೊಳ್ಳುತ್ತೇನೆ!!
ಕೆಲವೊಮ್ಮೆ ಏನೂ ಬೇಡವೆನಿಸಿದಾಗ ಸುಮ್ಮನೆ ಹೋಗಿ ಮಲಗುತ್ತೇನೆ!!
ಇವೆಲ್ಲಾ ನನ್ನ ಖುಷಿಗೆ.
ಹಾಗೆಂದು ನಾನು ಮನೆಯವರನ್ನು ಕಡೆಗಣಿಸಿಲ್ಲ. ಜವಾಬ್ದಾರಿಗಳಿಂದ ನುಣುಚಿಕೊಂಡಿಲ್ಲ.
ಎಲ್ಲವನ್ನು ಪೂರೈಸಿ ನಾ ನನ್ನನ್ನು ಪ್ರೀತಿಸುವುದಕ್ಕೆ ಸಮಯ ಇಟ್ಟಿದ್ದೇನೆ.ಏಕೆಂದರೆ ನಾ ಖುಷಿಯಿಂದ ಇದ್ದರೆ ನನ್ನವರೆಲ್ಲಾ ಖುಷಿಯಿಂದ ಇರುತ್ತಾರೆ.
ನಮ್ಮನ್ನು ನಾವು ಪ್ರೀತಿಸಿದಲ್ಲಿ ಮಾತ್ರವೇ ಬೇರೆಯವರನ್ನು ಪ್ರೀತಿಸಲು ಸಾಧ್ಯ.ಅದರಲ್ಲಿ ಯಾವ ತಪ್ಪು ಇಲ್ಲ!
ಪ್ರೇಮಿಗಳ ದಿನ ಒಂದು ದಿನದ ಹಬ್ಬವಲ್ಲ. ಜೀವನ ಪೂರ್ತಿ ಮಾಡಬೇಕು. ನೀವು ಸರಿಯಾದ ವ್ಯಕ್ತಿಯೊಂದಿಗಿದ್ದರೆ ದಿನವು ನಿಮಗೆ ಪ್ರೇಮಿಗಳ ದಿನವೇ! ಆ ಸರಿಯಾದ ವ್ಯಕ್ತಿ ನಿಮಗೆ ನೀವೇ! ಏಕೆಂದರೆ ಕೊನೆಯವರೆಗೂ ನಮ್ಮೊಂದಿಗೆ ಉಳಿಯುವುದು ನಾವು ಮಾತ್ರ!!
ಆದ್ದರಿಂದ ನನಗೆ ನಾನೇ ವ್ಯಾಲೆಂಟಿನ್!!!
(ಈ ಲೇಖನ ಕೂಡ ನನ್ನ ನಾ ಪ್ರೀತಿಸುವ, ಖುಷಿ ಪಡಿಸುವ ಒಂದು ಭಾಗ!)
ನಿಮ್ಮೆಲ್ಲರಿಗೂ ವ್ಯಾಲೆಂಟಿನ್ಸ್ ದಿನದ ಶುಭಾಶಯಗಳು!
#valentines #love #selflove #kannadablog