#ಎಮೋಜಿಗಳ_ಲೋಕ
#ಕಾಲ್ಪನಿಕ
ಹೆಲೋ ಮಾನವರೇ,
ಹೇಗಿದ್ದೀರಿ?!! ಕೊರೋನ, ಓಮಿಕ್ರಾನ್ ಮಧ್ಯೆ ಸೌಖ್ಯವೇ ಎಂದು ಕೇಳುವುದು ಸರಿಯಲ್ಲ. ಆದರೂ ಔಪಚಾರಿಕವಾಗಿ ಕೇಳಬೇಕಲ್ಲ. ಅರೇ! ನಾನ್ಯಾರು ಎಂದು ಹೇಳಿಲ್ಲ ಅಲ್ವಾ?! ನಾನು ಎಮೋಜಿ! ನಿಮ್ಮ ಮೊಬೈಲ್/ಲ್ಯಾಪಾಟ್ ನ ಒಳಗೆ ಮೂಲೆಯಲ್ಲಿ ಕುಳಿತಿರುವ ಎಮೋಜಿಗಳಲ್ಲಿ ನಾನು ಒಂದು. ನಾವು ಸಾಮಾನ್ಯವಾಗಿ ಮನುಷ್ಯರೊಂದಿಗೆ ಹೀಗೆ ಮಾತಾಡುವುದಿಲ್ಲ. ಆದರೆ ಕೆಲವೊಂದು ವಿಷಯ ಹೇಳಬೇಕಿತ್ತು. ಅದಕ್ಕಾಗಿ ಬಂದೆ.
ನಿಮಗೆ ಗೊತ್ತಲ್ವಾ! ಸಾವಿಲ್ಲದ ಮನೆಯ ಸಾಸಿವೆಯ ಹಾಗೆ ನಾವು ಎಲ್ಲರ ಮನೆಯಲ್ಲೂ ಇದೀವಿ!! ಅಂದರೆ ಎಲ್ಲರ ಮೊಬೈಲ್, ಲ್ಯಾಪ್ ಟಾಪ್ ನಲ್ಲಿ ಇದ್ದೇವೆ. ನಮ್ಮದೊಂದು ಪುಟ್ಟ ಪ್ರಪಂಚ. ಹುಟ್ಟು-ಸಾವು ಇಲ್ಲಿ ಇದೆ. ನಮ್ಮ ಸೃಷ್ಟಿಕರ್ತರು ಬಹುಶಃ ನವರಸಗಳನ್ನು ನೋಡಿ ಪ್ರೇರೇಪಿತರಾಗಿ ಅದಕ್ಕೆ ಇನ್ನೊಂದಿಷ್ಟು, ಮತ್ತೊಂದಿಷ್ಟು ಸೇರಿಸಿ ಬಹು ದೊಡ್ಡ ಎಮೋಜಿಗಳ ಲೋಕವನ್ನು ಸೃಷ್ಟಿಸಿರಬಹುದೇನೋ ಗೊತ್ತಿಲ್ಲ. ನಿಮ್ಮ ಸೃಷ್ಟಿಯ ಹಾಗೆ ನಮ್ಮ ಸೃಷ್ಟಿ ಬಗ್ಗೆಯೂ ಗೊಂದಲಗಳಿವೆ!! ನಿಮ್ಮ ಹಾಗೆ ನಮ್ಮಲ್ಲಿ ಕೂಡ ಸಾವು ಇದೆ. ಹೇಗೆ?!! ನಮ್ಮ ಉಪಯೋಗವಿಲ್ಲವೆಂದರೆ ನಮ್ಮ ಸೃಷ್ಟಿಕರ್ತ ನಮ್ಮನ್ನು ಎಮೋಜಿ ಲೋಕದಿಂದ ಅಳಿಸಿ ಬಿಡುತ್ತಾನೆ!!
ಇನ್ನು ನಮ್ಮ ಎಮೋಜಿಗಳ ಪ್ರಪಂಚಕ್ಕೆ ಹೋಗೋಣ. ನಾವು ಒಂದು ರೀತಿ ಸ್ವಚ್ಛಂದ ಹಕ್ಕಿಗಳಂತೆ, ನಮ್ಮ ಪ್ರಪಂಚದಲ್ಲಿ. ಆ ಬಾನಿನಲ್ಲಿ ಹಾರುವ ಹಕ್ಕಿಗಳಂತೆ ನಾವು ಒಂದು ಮೊಬೈಲ್ ನಿಂದ, ಇನ್ನೊಂದು ಮೊಬೈಲ್ಗೆ /ಲ್ಯಾಪ್ಟಾಪ್ ಗೆ ಸ್ವಚ್ಚಂದವಾಗಿ ಹಾರಾಡುತ್ತಿರುತ್ತೇವೆ. ಆ ಹಕ್ಕಿಗಳಿಗೆ ದಣಿವಾಗಬಹುದು, ಬೇಟೆಗಾರನ ಕಾಟವಿರಬಹುದು ಆದರೆ ನಮಗೆ ಅದಾವ ತೊಂದರೆಗಳು ಇಲ್ಲ. ಅಷ್ಟೇ ಅಲ್ಲ ನಮ್ಮಲ್ಲಿ ನಿಮ್ಮ ಹಾಗೆ ಗಂಡು-ಹೆಣ್ಣೆಂಬ ಭೇದವಿಲ್ಲ, ಶಾಲೆಗೆ ಹೋಗಿ ಕಲಿಯಬೇಕಿಲ್ಲ, ಓದಿ ರ್ಯಾಂಕ್ ತೆಗೆದು ಕೆಲಸಕ್ಕೆ ಸೇರಬೇಕಿಲ್ಲ, ಮದುವೆ ಮಕ್ಕಳೆಂಬ ಸುಳಿಗೆ ಸಿಲುಕಬೇಕಿಲ್ಲ. ಜಾತಿ ಧರ್ಮ ಪಾಲಿಸಬೇಕಿಲ್ಲ. ನಿಮ್ಮ ಹಾಗೆ ಮನೆ ಸೈಟು ಕಾರು ಎಂದು ಸೋಶಿಯಲ್ ಸ್ಟೇಟಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ! ನಿಮ್ಮ ಹಾಗೆ ಆ ರೋಗ, ಈ ವೈರಸ್ ಎಂದು ಭಯಪಡಬೇಕಾಗಿಲ್ಲ!!! ಅಡಿಗೆ ಆನ್ಲೈನ್ ಶಾಲೆಯ ತಲೆನೋವಿಲ್ಲ, ಶಾಪಿಂಗ್ – ಕ್ಲೀನಿಂಗ್ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಇಷ್ಟೆಲ್ಲಾ ತಲೆನೋವಿಲ್ಲದ ಸುಂದರ ಪ್ರಪಂಚ ನಮ್ಮದು. ಕಣ್ಣು ಹಾಕಬೇಡಿ ಪ್ಲೀಸ್!!
ಆಗ ಸಂದೇಶ ರವಾನಿಸಲು ಪಕ್ಷಿಗಳು ಇದ್ದವು. ಈಗ ನಾವು ನಿಮ್ಮ ಅಕ್ಷರಗಳಿಗೆ, ಭಾವನೆಗಳ ಬಣ್ಣ ತುಂಬಿ ಆ ಪಕ್ಷಿಗಳಿಗಿಂತಲೂ ಬಹು ಬೇಗ ಸಂದೇಶ ರವಾನಿಸುತ್ತೇವೆ. ಅಕ್ಷರ ರೂಪದ ಸಂದೇಶಗಳಿಗೆ ನಾವು ಎಮೋಜಿಗಳು ಇನ್ನೂ ಹೆಚ್ಚು ಅರ್ಥ ಕೊಡುತ್ತೇವೆ. ನಾವು ಇಲ್ಲದಿದ್ದರೆ ನಿಮ್ಮ ಸಂದೇಶಗಳು ಎಷ್ಟು ಬೋರ್ ಗೊತ್ತಾ?! ನೀವು ಹೊಟ್ಟೆ ಹುಣ್ಣಾಗುವಂತ ಒಂದು ಜೋಕ್ಸ್ ನಿಮ್ಮ ಸ್ನೇಹಿತರಿಗೆ ಕಳುಹಿಸಿದಾಗ, “ನಗು ಬಂತು” ಎಂದು ಆ ಕಡೆಯಿಂದ ಮೆಸೇಜ್ ಬಂದರೆ ಹೇಗಿರುತ್ತೆ !?? ಏನೋ ಮಿಸ್ಸಿಂಗ್ ಅಲ್ಲಾ?! ಅದೇ ಸ್ನೇಹಿತರು ನಮ್ಮ ಈ ಮೂರು ಜನರನ್ನು“😆😂🤣” ಆ ಮೆಸೇಜ್ ಗೆ
ಸೇರಿಸಿ ಕಳುಹಿಸಿದರೆ ಆಗ, ಅವರು ನಿಮ್ಮ ಎದುರಿಗೆ ಕುಳಿತು ನಕ್ಕಂತೆ ಭಾಸವಾಗುವುದಿಲ್ಲವೇ?! ಭಾವನಾತ್ಮಕವಾಗಿ ಕಮ್ಯುನಿಕೇಟ್ ಮಾಡಲು ನಾವು ಎಷ್ಟು ಸಹಕಾರಿ ತಾನೇ!
ಮತ್ತೆ ಕೆಲವೊಮ್ಮೆ ನಿಮ್ಮ ಪದಗಳು ವಿಫಲವಾದಾಗ, ನಾವು ಎಮೋಜಿ ಮಾತನಾಡುತ್ತೇವೆ. ನೀವು ಹೇಳಬೇಕಾದದ್ದನ್ನು ನಾವು ಹೇಳುತ್ತೇವೆ. ಮತ್ತು ನಮ್ಮ ಮುಖಾಂತರ ಕಳಿಸುವ ಸಂದೇಶಗಳ ಓದಲು ಅಕ್ಷರಸ್ಥರೇ ಆಗಬೇಕಿಲ್ಲ. ಖಾಲಿ ಎಮೋಜಿಗಳಿಂದಲೇ ಕಥೆ ಹೇಳಬಹುದು..! ಹಾಗೇ ನಮ್ಮನ್ನು ಉಪಯೋಗಿಸುವವರಲ್ಲಿ ಹುಡುಗಿಯರದ್ದೇ ಮೇಲುಗೈ. ಅದಕ್ಕಾಗಿ ಅವರಿಗೊಂದು 😘!!
ನಮ್ಮ ಲೈಫಲ್ಲಿ ಕೂಡ ಕಷ್ಟಗಳಿವೆ! ನಮಗೂ ತುಂಬಾ ಕಾಂಪಿಟೇಶನ್ ಇದೆ! ಜಿಫ್/ ಸ್ಟಿಕ್ಕರ್ ಪ್ಯಾಕ್ ಇತ್ಯಾದಿಗಳು ಈಗ ಬಂದಿವೆ. ಇವೆಲ್ಲ ಇದ್ದರೂ ನಾವು ಬಹಳ ಆಸ್ಥೆಯಿಂದ ನಮ್ಮ ಕೆಲಸ ಮಾಡುತ್ತಾ ಬಂದಿದ್ದೇವೆ. ಸಾಧ್ಯವಾದಷ್ಟು ನಮ್ಮನ್ನು ಉಪಯೋಗಿಸಿ ಆದರೆ ದಯವಿಟ್ಟು ಅರ್ಥ ಮಾಡಿಕೊಂಡು ಉಪಯೋಗಿಸಿ, ಅಪಾರ್ಥಗಳು ಆಗುವುದನ್ನು ತಪ್ಪಿಸಿ. ಹೌದು! ಆ ವಿಷಯಕ್ಕೆ ಬರುತ್ತೇನೆ.
ನೀವು ಮನುಷ್ಯರು ನಮ್ಮ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ!! ನಿಮ್ಮ ಮನಸ್ಸಿಗೆ ಬಂದಂತೆ ನಮ್ಮನ್ನು ಉಪಯೋಗಿಸುತ್ತೀರಾ! ನಿಮ್ಮ ಮಾನವನೊಬ್ಬ ತನ್ನ ವಯಸ್ಸಾದ ಸಂಬಂಧಿಕರ ಸಾವಿಗೆ ಸಂತಾಪ ಸೂಚಿಸಲು, ವಾಟ್ಸ್ಯಾಪ್ ನಲ್ಲಿ “RIP😂🤣” ಎಂದು ಹಾಕಿದ್ದ!!ಅವನ ಪ್ರಕಾರ ಆ ಎಮೋಜಿಗಳು, ನೊಂದು ಜೋರಾಗಿ ಅಳುವ ಭಾವನೆ ಸೂಸುವ ಎಮೋಜಿ! ನಾನು ಬೇಡ ಎಂದು ಹೇಳುತ್ತಿದ್ದರೂ ಕೂಡ! (ನಾನು ಹೇಳಿದರು ಅದು ನಿಮಗೆ ಕೇಳುವುದಿಲ್ಲ ಬಿಡಿ. ಪಾಪ ನಿಮ್ಮ ತಪ್ಪಲ್ಲ!!) ಅವನ ಸ್ಟೇಟಸ್ ನಲ್ಲಿ ನನ್ನ ನೋಡಿದ ಆ ಸತ್ತವರ ಮನೆಯವರು ಮುಖ ಸಿಂಡರಿಸಿದರು. ನನಗೆ ಬಾರಿ ಮುಖಭಂಗವಾಯಿತು!
ಅಷ್ಟೇ ಅಲ್ಲ ಮೊನ್ನೆ ಹುಡುಗನೊಬ್ಬ ತನ್ನ ಕ್ರಶ್ ಗೆ ಸಂಜೆ ಐಸ್ಕ್ರೀಂ ತಿನ್ನಲು ಹೋಗೋಣ ಎನ್ನುತ್ತಾ ಸ್ಟೈಲಾಗಿ ಈ “💩” ಎಮೋಜಿ ಯನ್ನು ಉಪಯೋಗಿಸಿದ. ಅವನ ಪ್ರಕಾರ ಇದು ಕೋನ್ ಐಸ್ ಕ್ರೀಮ್! ನನ್ನ ಸೃಷ್ಟಿಕರ್ತನ ಪ್ರಕಾರ ಇದು ಮಲ/ Poop ಎಮೊಜಿ! ಅವಳ ಫೋನ್ ತಲುಪಿದ ತಕ್ಷಣ ನನ್ನ ನೋಡಿದ ಆ ಚೆಲುವೆ, ವಾಂತಿ ಮಾಡುವ ಹಾಗೆ ಮುಖ ಮಾಡಿದಳು. ಎಷ್ಟು ಅವಮಾನ ನನಗೆ!! ನನಗೂ ಭಾವನೆಗಳಿವೆ ಅರ್ಥ ಮಾಡಿಕೊಳ್ಳಿ! ಅಷ್ಟು ಸುಂದರ ಹುಡುಗಿ ನನ್ನ ಹಾಗೆ ನೋಡಿದ್ದು, ನನ್ನ ಮನಸ್ಸಿಗೆ ತುಂಬಾ ನಾಟಿತು!
ನಿಮ್ಮಲ್ಲಿ ಮತ್ತೊಂದು ಬೇಡುತ್ತೇನೆ. ಅದು ನಿಮ್ಮ ಒಳಿತಿಗೆ. ಪುಟ್ಟ ಮಕ್ಕಳ ಕೈಗಂತೂ ಮೊಬೈಲ್ ಕೂಡಲೇ ಬೇಡಿ. ಮೊನ್ನೆ ತನ್ನಪ್ಪನ ಫೋನಿಂದ ಮಕ್ಕಳು ಅವನ ಮಹಿಳಾ ಸಹೋದ್ಯೋಗಿಗೆ ಈ “❤️🌹💞😘😍” ಎಮೋಜಿಗಳ ಕಳಿಸಿ ಮದುವೆ ಮುರಿದು ಹೋಗುವ ಹಂತಕ್ಕೆ ತಲುಪಿತ್ತು. ಪುಣ್ಯ ಲಟ್ಟಣಿಗೆ ಮಾತ್ರ ಮುರಿಯಿತು! ನನಗೆ ಸಂಬಂಧಗಳನ್ನು ಮುರಿಯಲು ಸುತಾರಂ ಇಷ್ಟವಿಲ್ಲ. ದಯವಿಟ್ಟು ನಿಗಾವಹಿಸಿ. ಆಮೇಲೆ ನನ್ನ ದೂಷಿಸಬೇಡಿ! ಇವೆಲ್ಲಾ ಅವಾಂತರಗಳು ಗೊತ್ತಿಲ್ಲದೆ ಕಳುಹಿಸಿದ ತಪ್ಪು ಎಮೋಜಿಗಳಿಂದ ಆಗಿದ್ದು. ಹಾಗೆ ಗೊತ್ತಿದ್ದರೂ ಬೇಕಂತಲೇ ತಪ್ಪು ಎಮೋಜಿ ಕಳಿಸುವವರು ಇದ್ದಾರೆ. ಅದೊಂದು ರೀತಿ ಮುಖವಾಡ ತೊಟ್ಟಂತೆ!!
ದೂರದಲ್ಲಿರುವ ತಮ್ಮ ಪ್ರೀತಿ ಪಾತ್ರರು ಯೋಚಿಸದಿರಲಿ ಎಂದು ತಾನು ಎಷ್ಟು ನೋವಿನಲ್ಲಿದ್ದರೂ,”ಚೆನ್ನಾಗಿದ್ದೇನೆ😊” ಎಂದು ಈ ಹಸನ್ಮುಖ ಹಾಕಿ ಕಳುಹಿಸುತ್ತಾರೆ. ಖಿನ್ನತೆಯಿಂದ ಬಳಲುತ್ತಿದ್ದರೂ, ಏನು ಆಗಿಲ್ಲವೆಂಬಂತೆ ಪ್ರಪಂಚಕ್ಕೆ ತೋರಿಸಲು ತಮಗೆ ಬರುವ ಸಂದೇಶಗಳೊಂದಿಗೆ “😀” ನಗುಮುಖದಿಂದ ಉತ್ತರಿಸಿರುವವರಿದ್ದಾರೆ! ಇದಕ್ಕೆಲ್ಲಾ ಮೂಖ ಸಾಕ್ಷಿ ನಾನಾಗುತ್ತೇನೆ! ನನಗೆ ಗೊತ್ತಿದ್ದರೂ ಏನೂ ಮಾಡಲಾಗುವುದಿಲ್ಲ!
ಹಾಗೆ ಇನ್ನೊಂದು ಮಾನವರ ಗುಂಪಿದೆ!
ಚೆನ್ನಾಗಿ ತಿನ್ನುತ್ತಾ ಪಾರ್ಟಿಯಲ್ಲಿ ಇದ್ದರೂ. ಆಫೀಸ್ ಗೆ ರಜೆಹಾಕಲು ಹುಷಾರಿಲ್ಲವೆಂದು “🤕🤒” ಕಳುಹಿಸುತ್ತಾರೆ. ಚಾಟ್ ಮಾಡಲು ಆಸಕ್ತಿ ಇಲ್ಲದಿರುವಾಗ, “ಗುಡ್ ನೈಟ್……ಫೀಲಿಂಗ್ ಸ್ಲೀಪಿ 😴” ಎಂದು ಸುಳ್ಳು ಹೇಳಿ ಮೂವಿ ನೋಡುತ್ತಾರೆ. ಪ್ರೀತಿ ಇಲ್ಲದಿದ್ದರೂ “ಲವ್ ಯೂ 😘😘😘”!! ಎಂದು ನನ್ನನ್ನು ಅವರ ಮೊಬೈಲ್ ನಿಂದ ಫೋರ್ಸ್ ಮಾಡಿ ದಬ್ಬುತ್ತಾರೆ! ಈ ಸೀಕ್ರೆಟ್ ನನಗೆ ಮತ್ತು ಅವರಿಗೆ ಮಾತ್ರ ಗೊತ್ತಿರುತ್ತದೆ. ಗೊತ್ತಿದ್ದರೆ ಏನು ಮಾಡಲು ನನ್ನಿಂದ ಆಗುವುದಿಲ್ಲ! ಐ ಆಮ್ ಸ್ಸಾರಿ!!
ಈ ಎಮೋಜಿಗಳ ಕಥೆಗಳೆಲ್ಲ ನನಗೆ ಹೇಗೆ ಗೊತ್ತು ಎಂದುಕೊಂಡಿರಾ. ರಾತ್ರಿಯಾಗುತ್ತಿದ್ದಂತೆ ನಮ್ಮ ಕೆಲಸ ಮುಗಿದ ಮೇಲೆ ನಾವೆಲ್ಲ ಎಮೋಜಿಗಳು ಒಂದೆಡೆ ಸೇರಿ, ಆ ದಿನ ನಡೆದ ಎಲ್ಲ ಕಥೆ ವ್ಯಥೆಗಳನ್ನು ಹಂಚಿಕೊಳ್ಳುತ್ತೇವೆ. ಹಾಗಾಗಿ ಇವೆಲ್ಲ ನನಗೆ ತಿಳಿದಿದೆ. ಸರಿ ಕತ್ತಲಾಯಿತು. ಎಲ್ಲಾ ಎಮೋಜಿಗಳು ಸೇರಿರುತ್ತಾರೆ. ನಾನು ಹೋಗುತ್ತೇನೆ. ಹೊಸ ವಿಷಯಗಳನ್ನು ತಿಳಿದುಕೊಂಡು ನಿಮ್ಮೊಂದಿಗೆ ಪುನ: ಹಂಚಿಕೊಳ್ಳುತ್ತೇನೆ. ಅಲ್ಲಿವರೆಗೆ ಬೈ ಬೈ …
ಇಂತಿ ನಿಮ್ಮ ಪ್ರೀತಿಯ,
🙂😊☺️😄😀😃… ♾️
Photo by Denis Cherkashin on Unsplash
These are truly great ideas in regarding blogging. You have touched some fastidious points here.
Any way keep up wrinting.