facebook

ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ!!

***ಗರ್ಭಿಣಿಯರು ಓದದಿದ್ದರೆ ಉತ್ತಮ***

ಈ ಕ್ಷಣದವರೆಗೂ ಎಲ್ಲಾ ಚೆನ್ನಾಗಿ ಇತ್ತು. ಖಾಲಿ ಚೆನ್ನಾಗಿ ಏನು, ವಾವ್ಹ್!! ಅನ್ನುವ ಹಾಗೆ ಇತ್ತು. ಆದರೆ ಆ ಮಾತುಗಳನ್ನು ನನ್ನಮ್ಮನ ಬಾಯಿಂದ ಕೇಳಿದ ಮೇಲೆ, ಯಾರೋ ನನ್ನನ್ನೇ ಸೀಳಿದಂತಾಯ್ತು! ನನ್ನ ಹೊಸ ಜೀವನದ ಕನಸುಗಳೆಲ್ಲಾ ಕೊಚ್ಚಿ ಹೋದವು ನೀರೊಳಗೆ!

**********************************
ಆ ದಿನ ಚೆನ್ನಾಗಿ ನೆನಪಿದೆ. ಸರಿ ಸುಮಾರು ೯ ತಿಂಗಳ ಹಿಂದೆ, ನನ್ನ ಹಳೆ ಜೀವನಕ್ಕೆ ಮುಕ್ತಿ ಸಿಕ್ಕಿ, ಹೊಸ ಜೀವನಕ್ಕೆ ಕಾಲಿಟ್ಟಿದ್ದೆ. ನನ್ನ ಹೃದಯ ಬಡಿತ ಕೇಳಿ, ಅಪ್ಪ ಅಮ್ಮ ಇಬ್ಬರೂ ಕುಣಿದು ಕುಪ್ಪಳಿಸಿ ಎಲ್ಲರಿಗೂ ಫೋನ್ ಮಾಡಿ ಸಿಹಿ ಸುದ್ದಿ ಹೇಳುತ್ತಿದ್ದರು. ಅವರ ಪಕ್ಕದಲ್ಲಿದ್ದ ನನ್ನ ಪುಟಾಣಿ ಅಣ್ಣನು ಖುಷಿಯಿಂದ ಕುಣಿಯುತ್ತಿದ್ದ! ನಾನು ನನ್ನಮ್ಮನ ಗರ್ಭದೊಳಗೆ ಇನ್ನೂ ಸಾಸಿವೆ ಗಾತ್ರ ಇದ್ದೆ ಆಗ. ಆದರೆ ಅವರ ಬೆಟ್ಟದಷ್ಟು ಪ್ರೀತಿ ನೋಡಿ ನಾನೂ ಒಳಗೆ ಕುಣಿದು ಕುಪ್ಪಳಿಸಲು ಪ್ರಯತ್ನಿಸುತ್ತಿದ್ದೆ. ಕೊನೆಗೂ ನನ್ನ ಭಕ್ತಿಗೆ ದೇವರು ಮೆಚ್ಚಿ, ನನಗೆ ಈ ಜನ್ಮದಲ್ಲಿ ಪ್ರೀತಿ ಸಿಗುವಂತೆ ಮಾಡಿದನಲ್ಲ ಎಂದು ಇಲ್ಲಿಂದಲೇ ಕೈ ಮುಗಿದಿದ್ದೆ!

ಆದಷ್ಟು ನನ್ನಮ್ಮನಿಗೆ ತೊಂದರೆ ಕೊಡದಂತೆ ಇರಬೇಕು ಎಂದು ಅವಳಿಗೆ ಒಂದು ದಿನವೂ ವಾಂತಿ, ತಲೆ ಸುತ್ತು ಬರದಂತೆ ನೋಡಿಕೊಂಡೆ. ‘ನನಗೆ ಪ್ರೆಗ್ನೆಂಟ್ ಎಂದು ಅನಿಸುವುದೇ ಇಲ್ಲ! ವಾಂತಿ, ಸುಸ್ತು ಅಂತಹ ಯಾವ ಸಿಂಪ್ಟಮ್ಸ್ ಇಲ್ಲ. ಆರಾಮವಾಗಿ ಇದ್ದೀನಿ’,ಎಂದು ಹೊಟ್ಟೆ ಸವರಿ ಖುಷಿಯಿಂದ ಬೇರೆಯವರೊಂದಿಗೆ ಅಮ್ಮ ಹೇಳುವುದನ್ನು ಕೇಳಿ ಒಳಗೆ ಖುಷಿ ನನಗೆ.

ಅಂತೂ ಇಂತೂ ಐದನೇ ತಿಂಗಳು ಬಂತು. ನಾನು ಸ್ವಲ್ಪ ಬೆಳೆದೆ. ನನಗೊಂದು ಆಕಾರ ಬಂತು. ಅಂಗಾಂಗಗಳು ಮೂಡಿದವು. ಸ್ಕ್ಯಾನಿಂಗ್ ಆಯ್ತು. ಎಲ್ಲಾ ಸರಿ ಇದೆ ಎಂದಾಗ ಅಮ್ಮ ಅಪ್ಪನಿಗೆ ಸಮಾಧಾನ. ನನಗೂ ಒಳಗೆ ನೆಮ್ಮದಿ. ಅಮ್ಮಾ ಡಾಕ್ಟರ್ ಹತ್ತಿರ ಮಗು ನೋಡಬೇಕು ಎಂದಳು. ಅದ ಕೇಳಿ ನಾನು ಸ್ವಲ್ಪ ಗಾಬರಿ, ಜಾಸ್ತಿ ರೋಮಾಂಚನಗೊಂಡೆ! ನನ್ನಮ್ಮ ಮೊದಲನೇ ಬಾರಿ ನನ್ನ ನೋಡುತ್ತಿರೋದು ಎಂದು, ಹೇಗೇಗೋ ಅಡ್ಡಾದಿಡ್ಡಿ ಮಲಗಿದ್ದ ದೇಹವನ್ನು ಸರಿಮಾಡಿಕೊಂಡು, ಮುಖದ ಮೇಲೆ ನಗು ಹೊತ್ತು ಪೋಸ್ ಕೊಟ್ಟೆ. ಸ್ಕ್ಯಾನಿಂಗ್ ಮೂಲಕ ನನ್ನ ನೋಡಿದ ನನ್ನಮ್ಮ ಖುಷಿಯಿಂದ ‘ಮೈ ಬೇಬಿ!!’ಎಂದು ಅಲ್ಲಿಂದಲೇ ಮುತ್ತು ಕೊಟ್ಟು, ಅಪ್ಪನನ್ನು ಕರೆದು ತೋರಿಸಿದಳು. ಅವಳ ಆ ಪ್ರೀತಿಗೆ ಸೋತು ಆಗಲೇ ಹೊರಬಂದು ಅವಳನ್ನು ಅಪ್ಪಿ ಬಿಡಲೇ ಎನಿಸಿತು. ಆದರೆ ಹಾಗೆ ಮಾಡಿದರೆ ನಾನು ಪುನಃ ಸೀದಾ ದೇವರ ಸನ್ನಿಧಾನಕ್ಕೆ ಹೋಗುತ್ತೇನೆ ಎಂದು ಸುಮ್ಮನಾದೆ. ಬೇಗ ನಾ ಆಚೆ ಬರುವ ದಿನ ಬರಲಿ ಎಂದು ಪ್ರಾರ್ಥಿಸಿದೆ. ಆ ದಿನ ತುಂಬಾ ಖುಷಿಯಾಗಿ ಚೆನ್ನಾಗಿ ತಿಂದು ನಿದ್ರಿಸಿದೆ.

೭ ತಿಂಗಳ ನಂತರ ಸೀಮಂತ ಆಯ್ತು. ನಾನು ಚೆನ್ನಾಗಿ ಬೆಳೆದಿದ್ದೆ. ಈಗ ಒಳಗೆ ಅಲುಗಾಡಿದರೆ ಅವಳಿಗೆ ಸ್ವಲ್ಪ ನೋವಾಗಿ ಗಾಬರಿಯಾಗುತ್ತಿದ್ದಳು. ಹಾಗಾಗಿ ಆದಷ್ಟು ಅವಳಿಗೆ ನೋವಾಗದಂತೆ ಓಡಾಡುತ್ತಿದ್ದೆ. ರಾತ್ರಿ ಅವಳ ನಿದ್ದೆಗೆ ಭಂಗ ಬರದಂತೆ ನೋಡಿಕೊಳ್ಳುತ್ತಿದ್ದೆ. ನಾವಿಬ್ಬರೇ ಇದ್ದಾಗ ಮುತ್ತು ಕೊಟ್ಟು, ಹೊಟ್ಟೆ ಸವರಿ, ಅಮ್ಮ ಹಾಡು ಹೇಳಿದಾಗ, ಆಹಾ!! ಎಂತಹ ಆನಂದ! ಅವಳ ಸ್ಪರ್ಶಕ್ಕಾಗಿ ಹಾತೊರೆಯುತ್ತಿತ್ತು ಮನ. ಯಾವಾಗ ಅವಳು ಕೈಯಿಂದ ಎತ್ತಿಕೊಂಡು, ಎದೆಗಪ್ಪಿಕೊಂಡು, ನನ್ನನ್ನು ಮುದ್ದಾಡುವಳು, ಆಡಿಸುವಳು ಎಂದು ಕಾತರದಿಂದ ಕಾಯುತ್ತಿದ್ದೆ.
ಆದಷ್ಟು ಬೇಗ ಒಂಬತ್ತು ತಿಂಗಳು ತುಂಬಿ, ನಾನು ಆಚೆ ಬರುವುದನ್ನೇ ಎದುರು ನೋಡುತ್ತಿದ್ದೆ.

ಈಗಂತೂ ನಾನು ಬೇರೆ ಅಲ್ಲ, ಅವಳು ಬೇರೆ ಅಲ್ಲ. ಇಬ್ಬರು ಒಂದೇ ಏನೋ ಅನ್ನುವಷ್ಟು ಹತ್ತಿರವಾಗಿ ಬಿಟ್ಟಿದ್ದೆವು! ನಾನು ಅವಳ ದೇಹದ ಒಂದು ಭಾಗವಾಗಿ ಬಿಟ್ಟಿದ್ದೆ. ಏಕೆಂದರೆ ತುಂಬಾ ತಿಂಗಳಿಂದ, ಅವಳ ಜೊತೆಯೇ ಅವಳೊಳಗೆ ಇದ್ದೇನಲ್ಲ! ನನ್ನ ದೇಹ, ಮನಸ್ಸು ಎಲ್ಲವೂ ಸೂಕ್ಷ್ಮ. ಅವಳಿಗೆ ನೋವಾದರೆ ನನಗೆ ಅದರ ಎರಡರಷ್ಟು ನೋವು! ಅವಳು ಖುಷಿಯಾದರೆ ಡಬ್ಬಲ್ ಖುಷಿ ನನಗೆ!

ನಾ ಇಲ್ಲಿ ಒಳಗೆ ನಿರ್ಧರಿಸಿಯೇಬಿಟ್ಟಿದ್ದೆ! ನಾನು ಹುಟ್ಟಿದ ಮೇಲೆ ಒಳ್ಳೆಯ ಮಗುವಾಗಿ ಇರಬೇಕು. ಅವಳಿಗೆ ಯಾವತ್ತೂ ತೊಂದರೆ ಕೊಡಬಾರದು. ಕೊಟ್ಟಿದ್ದನ್ನೆಲ್ಲಾ ತಿನ್ನಬೇಕು. ಬೇಗ ಮಲಗಿ, ಹೋಮ್ ವರ್ಕ್ ಮಾಡಿ, ಅವಳಿಗೆ ಬಿಡುವು ಕೊಡಬೇಕು. ಅಣ್ಣನ ಜೊತೆ ಒಳ್ಳೆಯ ಸ್ನೇಹಿತನಾಗಿರಬೇಕು. ಚೆನ್ನಾಗಿ ಓದಿ, ಅಪ್ಪ ಅಮ್ಮಂಗೆ ಕೀರ್ತಿ ತಂದುಕೊಟ್ಟು, ಒಳ್ಳೆ ಕೆಲಸಕ್ಕೆ ಸೇರಬೇಕು. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಎಂದೆಲ್ಲಾ ಅಂದುಕೊಂಡೆ.

ಮಗು ತಲೆ ಕೆಳಗೆ ಬಂದರೆ ಸಿಸೇರಿನ್ ಬೇಡ ಅಂದಿದ್ದು ಕೇಳಿ, ನಾನು ಅಮ್ಮನಿಗೆ ತೊಂದರೆ ಕೊಡುವುದು ಬೇಡ ಎಂದು ತಲೆ ಕೆಳಗೆ ಮಾಡಿ ಸಿದ್ಧವಾಗಿದ್ದೆ. ಒಳಗೆ ನನಗೆ ಬಹಳ ಇಕ್ಕಟ್ಟು. ಅವಳ ಪ್ರೀತಿಯಿಂದಾಗಿ ನಾನು ದಷ್ಟ ಪುಷ್ಟವಾಗಿ ಬೆಳೆದಿದ್ದೆ. ಇನ್ನು ಸ್ವಲ್ಪ ದಿನ ಅಷ್ಟೇ ಅಲ್ವ ಈ ಗುಹೆಯೊಳಗಿನ ವಾಸ, ಎಂದು ನಾನು ಕಾಯುತ್ತಿದ್ದೆ. ಇನ್ನೇನು ದಿನ ಹತ್ತಿರ ಬಂತಲ್ಲ ಎಂದು, ಅಮ್ಮ ಅಪ್ಪ ಇಬ್ಬರೂ, ನನಗಾಗಿ ಶಾಪಿಂಗ್ ಮಾಡಲು ಹೋದರು. ನಾನು ಒಳಗೆ ಕುಣಿಯುತ್ತಿದ್ದೆ, ನನಗಾಗಿ ಏನೆಲ್ಲಾ ಖರೀದಿಸುತ್ತಾರೆ ಎಂದು. ಕೆಲವು ಆಟಿಕೆಗಳು, ತೊಟ್ಟಿಲು ಖರೀದಿಸಿ ಬಟ್ಟೆಗಳನ್ನು ಖರೀದಿಸುತ್ತಿರುವಾಗ ಅಪ್ಪ ,’ಹೆಣ್ಣು ಮಕ್ಕಳ ಬಟ್ಟೆಯನ್ನೇ ತೆಗೆದುಕೊಳ್ಳುತ್ತಿದ್ದೀಯಲ್ಲ! ಒಂದಾದರೂ ಗಂಡು ಮಗು ಬಟ್ಟೆ ತೆಗೆದು ಇಟ್ಕೋ’,ಎಂದ ತಕ್ಷಣ, ಸಿಟ್ಟು ಬಂದಂತೆ ತೋರಿದ ನನ್ನ ಅಮ್ಮ,’ಬಿಡ್ತು ಅನ್ನಿ!! ಬಾಯ್ ಬೇಬಿ ಇಷ್ಟ ಇಲ್ಲ! ಒಬ್ಬ ಇದ್ದಾನಲ್ಲ ಸಾಕು! ಈ ಬಾರಿ ಹೆಣ್ಣು ಮಗುವೇ ಬೇಕು ನನಗೆ. ಅದಕ್ಕಾಗಿ ದೇವರಲ್ಲಿ ಹರಕೆ ಕಟ್ಟಿದ್ದೇನೆ. ಪ್ಲೀಸ್! ಗಂಡು ಮಗು ನನಗೆ ಬೇಡ!! ಬಿಡ್ತು ಅನ್ನಿ’,ಎಂದಳು. ಅಪ್ಪ ಅವಳಿಗೆ ಏನೋ ತಿಳಿ ಹೇಳುತ್ತಿದ್ದ,’ಹಾಗೆಲ್ಲ ಹೇಳಬೇಡ! ಒಳಗಿರುವ ಮಗುವಿಗೆ ಅದು ಎಫೆಕ್ಟ್ ಆಗುತ್ತೆ’,ಅಂತ.

 

ಅಪ್ಪ ಹೇಳಿದ್ದು ನಿಜ!! ಅದನ್ನು ಕೇಳಿದ ನನ್ನ ಎದೆ ಬಡಿತ ನಿಂತು ಹೋದಂತೆ ಆಯಿತು. ನನ್ನ ಕನಸುಗಳೆಲ್ಲ ನುಚ್ಚು ನೂರಾದವು. ನನ್ನ ಪ್ರಪಂಚವೇ ತಲೆ ಕೆಳಗಾದಂತೆ ತೋರಿತು ನನಗೆ. ಕಳೆದ ಜನ್ಮದಲ್ಲಿ ನಾನು ಹೆಣ್ಣಾಗಿ ಹುಟ್ಟಿ, ಯಾರಿಗೂ ಬೇಡವಾಗಿ ಬೆಳೆದೆ. ಮುಂದಿನ ಜನ್ಮದಲ್ಲಾದ್ರು ಗಂಡಾಗಿ ಹುಟ್ಟಿಸಪ್ಪ ಎಂದು ಅಂಗಲಾಚಿದ್ದೆ. ಈಗ ಗಂಡಾದಾಗ ನನ್ನ ಭಕ್ತಿ ಫಲ ಕೊಟ್ಟಿದೆ ಎಂದು ಹಿಗ್ಗಿದ್ದೆ. ಆದರೆ ಈಗ?!! ನನ್ನ ಹೊಸ ಅಮ್ಮನ ಮಾತು ಕೇಳಿ ಒಳಗೆ ಕುಸಿದು ಕುಳಿತುಬಿಟ್ಟೆ! ಗರ್ಭವೆಲ್ಲಾ ಕಂಪಿಸಿದಂತಾಯಿತು! ಈ ನೋವಿಗೆ ನೀರಿನ ಚೀಲವು ಹೊಡೆಯಿತು. ಆಸ್ಪತ್ರೆಗೆ ಅಪ್ಪ ಅಮ್ಮ ಇಬ್ಬರು ಓಡಿದರು.

************************************************************************************************************************

ಈಗ ಡಾಕ್ಟರ್ ನಾರ್ಮಲ್ ಡೆಲಿವರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಸರಿ ಇದ್ದರೂ ಮಗು ಯಾಕೆ ಆಚೆ ಬರುತ್ತಿಲ್ಲ ಎಂದು ತುಸು ಗಾಬರಿಯಾಗಿದ್ದಾರೆ. ನನ್ನನ್ನು ಆಚೆ ತರಲು ಪ್ರಯತ್ನಿಸುತ್ತಿದ್ದಾರೆ! ಆಚೆ ಬಂದು ಮುದ್ದಾದ ಹೆಣ್ಣು ಮಗು ನೋಡಲು ಕಾದಿರುವ ಅಮ್ಮನಿಗೆ, ನೋವು ಮಾಡಲು ನನಗೆ ಇಷ್ಟವಿಲ್ಲ. ನಾನು ಗಂಡು ಎಂದು ಡಾಕ್ಟರ್ ಹೇಳುವುದ ಕೇಳಿ, ಅವಳು ನಿರಾಶೆಗೊಂಡು, ದುಃಖದಿಂದ ಕಣ್ಣೀರಿಡುವುದ ನೋಡಲು ನನ್ನಿಂದ ಆಗುವುದಿಲ್ಲ! ಆದರೆ ಇಲ್ಲಿ ಇರಲು ನನಗೆ ಆಗುತ್ತಿಲ್ಲ. ಉಸಿರುಗಟ್ಟುತ್ತಿದೆ. ನನಗೆ ಇನ್ನು ಅಷ್ಟೊಂದು ಬುದ್ಧಿ ಬೆಳೆದಿಲ್ಲ. ಕಣ್ಣೇ ಬಿಡದ ಹಸುಗೂಸು ನಾನು! ಏನು ಮಾಡಲಿ ಎಂದು ತೋಚುತ್ತಿಲ್ಲ! ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ!!

ಈ ಲೇಖನ ಇಷ್ಟವಾದರೆ ಕೆಳಗಿರುವ ಹಾರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಧನ್ಯವಾದಗಳು❤️

 

Image by <a href=”https://www.freepik.com/free-vector/hand-drawn-fetus-illustration_21077218.htm#query=baby%20in%20womb&position=1&from_view=keyword&track=ais”>Freepik</a>

Leave a Reply

Your email address will not be published. Required fields are marked *