facebook

ಪಾಪಪ್ರಜ್ಞೆ ನನಗಿಲ್ಲ!

‘ಇದೊಂದು ಕೆಲಸ ಮುಗಿಯೋದೇ ಇಲ್ಲ! ಸಾಕು, ನಾ ಇವತ್ತಿಂದ ಅಡುಗೆ ಮಾಡೋದೇ ಇಲ್ಲ. ನಂಗೂ ಸಾಕಾಗಿ ಹೋಗಿದೆ ಜೀವನ, ಅಡುಗೆ ಮಾಡಲು ಆಲಸ್ಯ ಇರೋ ಹೆಣ್ ಮಕ್ಕಳ ಸಂಘ ಕಟ್ಬೇಕು ನಾನು’, ಎಂದು ಮನಸ್ಸಿನಲ್ಲಿ ಗೊಣಗಿಕೊಂಡು ಅಡಿಗೆ ಮಾಡುತ್ತಿದ್ದೆ! ಆಗ ಅತ್ತೆ,’ಏನಮ್ಮ, ಏನಾದ್ರು ಹೇಳಿದ್ಯಾ’,ಅಂದ್ರು. ಗೊಣಗಿದ್ದನ್ನು ಹೇಳಲು ಧೈರ್ಯ ಎಲ್ಲಿದೆ. ಏನಿಲ್ಲ ಎಂದೆ.
 ನಮಸ್ತೆ! ನಾನು ಯಾರು ಅಂತ ಗೊತ್ತ?! ಗೊತ್ತಿರುತ್ತೆ ನಿಮ್ಗೆ! ಗೊತ್ತಿಲ್ವಾ?! ನೆನಪಿಸಿಕೊಳ್ಳಿ. ನಾನು, ಅದೇ ನಾನೇ! ಹೆಸರಾ?! ಹೆಸರಲ್ಲೇನಿದೆ ಬಿಡಿ! ಮಹಿಳೆ, ವಯಸ್ಸು 3…,ಬೇಡ ಬೇಡ!! ಹೆಂಗಸರ ವಯಸ್ಸು ಹೇಳಬಾರದು! ಗೋಧಿ ಬಣ್ಣ, ಸಾಧಾರಣ ಮೈಕಟ್ಟು. ಅವರ ಹೆಂಡತಿ, ಇವರ ಸೊಸೆ, ಇಬ್ಬರು ಮಕ್ಕಳ ತಾಯಿ, ಇನ್ನೊಬ್ಬರ ಮಗಳು!! ಈಗ ನಾನು ಯಾರು ಅಂತ ಗೊತ್ತಾಯ್ತಲ್ಲ?!
ಈಗಷ್ಟೇ ರಾತ್ರಿ ಅಡಿಗೆ ಮುಗಿಸಿ ಬಡಿಸಲು ಕಾಯುತ್ತಾ ಕುಳಿತಿದ್ದೀನಿ. ನನ್ನ ಹೋಟೆಲ್ ಗೆ, ಕಸ್ಟಮರ್ಸ್ ಇನ್ನೂ ಬಂದಿಲ್ಲ!! ಕನ್ಫ್ಯೂಸ್ ಆಗ್ಬೇಡಿ! ಇದು ಮನೆನೇ. ಆದ್ರೆ ಇದೊಂದು ರೀತಿ ಹೋಟೆಲ್ ತರ! ಒಂದೇ ಅಡಿಗೆ ಮಾಡಿದರೆ, ಯಾರೂ ತಿನ್ನುವುದಿಲ್ಲ! ಹಾಗಾಗಿ ಏನಿಲ್ಲ ಅಂದ್ರು, ಎರಡು ಮೂರು ರೀತಿಯ ತರೇವಾರಿ ಅಡಿಗೆ ಮಾಡಬೇಕು! ಉದಾಹರಣೆಗೆ ಬೆಳಿಗ್ಗೆ ಬ್ರೇಕ್ ಫಾಸ್ಟ್ ಗೆ, ಅತ್ತೆ ಮಾವನಿಗೆ ಹಳೆ ಕಾಲದ ತಿಂಡಿಗಳು. ಮಕ್ಕಳಿಗೆ ಮಾರ್ಡನ್ ಕಮ್ ವೆಸ್ಟರ್ನ್! ಪತಿರಾಯರಿಗೆ ಇವೆರೆಡರ ಮಧ್ಯೆ ಆರೋಗ್ಯಕರವಾದದ್ದು! ಆಮೇಲೆ ಉಳಿದಿದ್ದು, ಮಿಕ್ಕಿದ್ದು ನಂಗೆ! ತೂಕ ಹೆಚ್ಚುವುದು ಹಂಗೆ!! ಮಧ್ಯಾಹ್ನ, ರಾತ್ರಿ ಊಟಕ್ಕೂ ಹೀಗೆ ತರೇವಾರಿ ಇರ್ಬೇಕು! ಈ ಮೂರು ಊಟಗಳ ಮಧ್ಯೆ ೨ ಬಾರಿ ಟೀ ಜೊತೆ ಸ್ನಾಕ್ಸ್ ಗಳನ್ನು ಮಾಡಬೇಕು! ವರ್ಕ್ ಫ್ರಮ್ ಹೋಮ್ ಬಂದ ಮೇಲೆ ಗಂಡನಿಗೆ ಕಾಫಿ, ಟೀ, ಕುರುಕು ತಿಂಡಿಗಳ ಸಪ್ಲೈ ನಡಿತಾನೇ ಇದೆ! ಇಷ್ಟೆಲ್ಲಾ ಮಾಡಿದ ಮೇಲೆ ಹೋಟೆಲ್ ಎಂದು ಕರೆಯಲೇ ಬೇಕಲ್ವ! ಆದ್ರೆ ಆ ಹೋಟೆಲ್ಗೂ, ನನ್ನ ಈ ಹೋಟೆಲ್ಗೂ ತುಂಬಾ ವ್ಯತ್ಯಾಸವಿದೆ. ಇಲ್ಲಿ ನಾನೇ ಅಡಿಗೆ ಕಮ್ ಸರ್ವ್ ಮಾಡುವವಳು! ಬಿಲ್ ಇಲ್ಲ, ಹಣ ಕಟ್ಟೋಲ್ಲ! ಊಟ ಚೆನ್ನಾಗಿದೆ ಅಂತಾ ಹೇಳೊರಿಲ್ಲ!! ಆದ್ರೆ ರುಚಿಯಲ್ಲಿ ಚೂರು ಹೆಚ್ಚು ಕಡಿಮೆ ಆದ್ರೆ ಮುಲಾಜಿಲ್ಲದೆ ಹೇಳುತ್ತಾರೆ! ಒಂದು ರೀತಿ ಪ್ರತಿ ದಿನಾ ನಾನು ಮಾಸ್ಟರ್ ಶೆಫ್ ಕಾಂಪಿಟೇಶನ್ ನಲ್ಲಿ ಭಾಗವಹಿಸಿದಂತೆ!! ಆದರೆ ಇಲ್ಲಿ ಪ್ರತಿಸ್ಪರ್ಧಿಗಳಿಲ್ಲ ನನಗೆ!! ಬರೀ ಜಡ್ಜ್ ಗಳಿದ್ದಾರೆ, ನನ್ನಡಿಗೆಯನ್ನು ಜಡ್ಜ್ ಮಾಡಲು!!
ಫಸ್ಟ್ ಕಸ್ಟಮರ್, ಅಲ್ಲಲ್ಲ!! ಅತ್ತೆ ಬಂದರು!! ಊಟ ಬಡಿಸುತ್ತಾ, ಮಾವ ಯಾಕೆ ಬಂದಿಲ್ಲ ಎಂದೆ. ‘ನೀನು ಸಂಜೆ ಮಾಡಿದ್ದ ಬಜ್ಜಿ ತಿಂದು ಅವರು ಹೊಟ್ಟೆ ಕೆಟ್ಟಿದೆಯಂತೆ. ಸ್ವಲ್ಪ ಖಾರ ಮಾಡ್ಬಿಟ್ಟಿದ್ದೆ!! ಮಜ್ಜಿಗೆ ಕುಡಿತಾರೆ, ಮಜ್ಜಿಗೆ ಮಾಡು’, ಅಂದ್ರು. ಈ ಆಪಾದನೆಗಳೆಲ್ಲ ನನಗೇನು ಹೊಸತಲ್ಲ. ಏಕೆಂದರೆ ಅಡಿಗೆ ಮನೆ ಇನ್ ಚಾರ್ಜ್ ನಂದೇ ಅಲ್ವಾ! ಅಲ್ಲಿ ಏನೇ ಆದ್ರು ನಾನೇ ಹೊಣೆ! ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ! ಅವರ ಮಾತಿಗೆ ತಲೆ ಅಲ್ಲಾಡಿಸುತ್ತಾ, ಮಜ್ಜಿಗೆ ಮಾಡಿಟ್ಮೇಲೆ ಆಫೀಸ್ ಕೆಲಸ ಮಾಡುತ್ತಿದ್ದ ಗಂಡನಿಗೆ ಹೋಗಿ ಊಟ ಕೊಟ್ಟು ಬಂದು, ಮಕ್ಕಳಿಗೂ ಊಟ ಕೊಟ್ಟು, ನಂತರ ಮಲಗಿಸಲು ಕರೆದುಕೊಂಡು ಹೋದೆ. ಬಾಯಲ್ಲಿ ಕಥೆ ಹೇಳುತ್ತಿದ್ದರೆ ಮನಸ್ಸಿನಲ್ಲಿ ನಾಳೆ ಬೆಳಿಗ್ಗೆಗೆ ಏನೆಲ್ಲಾ ತಿಂಡಿ ಮಾಡುವುದು ಎಂಬುವುದೇ ಓಡುತ್ತಿತ್ತು!! ಆಗ ದಡಕ್ಕನೆ ಎದ್ದ ಮಗಳು ನೆನಪಿಸಿದಳು,’ಅಮ್ಮ ನಾಳೆ ಪ್ರಾಜೆಕ್ಟ್ ಇದೆ! ಮ್ಯಾಮ್ ಒಂದು ಲಿಸ್ಟ್ ಕೊಟ್ಟಿದ್ದಾರೆ. ಎಲ್ಲಾ ತಗೊಂಡು ಬರೋದಿಕ್ಕೆ ಹೇಳಿದ್ದಾರೆ’,ಎಂದ್ಲು. ಒಂದೇ ಸಮನೆ ಬೆಳಿಗ್ಗೆಯಿಂದ ಕೆಲಸ ಮಾಡಿ, ಇನ್ನೇನು ಬೆನ್ನು ಕೊಟ್ಟು ಮಲಗಬೇಕು ಎಂದುಕೊಂಡಿದ್ದವಳಿಗೆ ಇದ ಕೇಳಿ ತಲೆ ಗಿರ್ ಅಂತು. ನಂದೇ ತಪ್ಪು! ನನ್ನ ಗಡಿಬಿಡಿಯಲ್ಲಿ ಮರೆತೆ ಎಂದುಕೊಂಡು, ಮಗನನ್ನು ಮಲಗಿಸಿ ಅವಳನ್ನು ಕರೆದುಕೊಂಡು, ನನ್ನ ಸ್ಕೂಟಿಯಲ್ಲಿ ಹೋಗಿ, ಎಲ್ಲ ತೆಗೆದುಕೊಂಡು ಬಂದಾಗ ಮಂಗಳಾರತಿ ಮಾಡಲು ಎಲ್ಲಾ ಸಿದ್ಧರಿದ್ರು! ‘ಸಂಜೆನೇ ನೋಡ್ಕೋಬಾರ್ದಿತ್ತ. ಇಷ್ಟೊತ್ತಲ್ಲಿ ಆಚೆ ಹೋಗಬೇಕಿತ್ತಾ?!’,ಎಂಬೆಲ್ಲಾ ಮಾಮೂಲಿ ಮಾತುಗಳು ಕೇಳಿಬಂದವು. ಮಗಳನ್ನು ಮಲಗಿಸಿ, ಹಾಸಿಗೆಗೆ ಬೆನ್ನು ತಾಗಿಸಿದವಳಿಗೆ ನಿದ್ರೆ ಹತ್ತಿತು. ಪತಿದೇವರು ಬಂದು ಎಬ್ಬಿಸಿದಾಗ ೧೨ ಆಗಿತ್ತು. ‘ನಾಡಿದ್ದು, ನಮ್ಮ ಆಫೀಸ್ ನಿಂದ ಒಂದು ದಿನಕ್ಕೆ ಟೀಂ ಔಟಿಂಗ್ ಹೋಗ್ತಾ ಇದ್ದೀನಿ. ನೆನಪಲ್ಲಿ ಒಂದು ಜೊತೆ ಬಟ್ಟೆ ಪ್ಯಾಕ್ ಮಾಡಿ ಬಿಡು’,ಎನ್ನುತ್ತಾ ಅವರ ಬಯಕೆಗಳ ತೀರಿಸಿಕೊಳ್ಳಲು ಹತ್ತಿರ ಬಂದರು! ಬೆಳಿಗ್ಗೆ ಇವರ ಹೊಟ್ಟೆಯ ಹಸಿವು, ರಾತ್ರಿ ಹೊಟ್ಟೆಯ ಕೆಳಗಿನ ಹಸಿವು ತೀರಿಸಿ, ನಾ ಮಲಗುವಷ್ಟರಲ್ಲಿ ೧ ಗಂಟೆಯಾಗಿತ್ತು!!!
ಬೆಳಿಗ್ಗೆ ಎದ್ದು ತಿಂಡಿ ಸಿದ್ಧಮಾಡಿ, ಮಕ್ಕಳನ್ನು ಶಾಲೆಗೆ ಬಿಟ್ಟು, ಉಳಿದಿದ್ದ ತಿಂಡಿಯನ್ನು ತಿಂದು, ಅಡಿಗೆ ರೆಡಿ ಮಾಡಿ ಊಟ ಬಡಿಸಿ, ಬಟ್ಟೆ ಮಡಚಿ, ಸಂಜೆ ಟಿ/ ಕಾಫಿ ಜೊತೆಗೆ ಬಜ್ಜಿ/ಬೊಂಡ ಇತ್ಯಾದಿಗಳನ್ನು ಮಾಡಿ, ಮಕ್ಕಳನ್ನು ಕರೆತಂದು ಹೋಂವರ್ಕ್ ಮಾಡಿಸಿ, ಪುನಃ ರಾತ್ರಿ ಅಡಿಗೆ ಶುರು!! ಇದೇ ನನ್ನ ಜೀವನ! ಮದುವೆಯಾದ ಮೇಲೆ ದಿನದ ಬಹುಪಾಲು ಈ ಅಡಿಗೆ ಮನೆಯಲ್ಲೇ ಕಳೆದು ಹೋಗುತ್ತದೆ. ನನ್ನ ಆಯಸ್ಸೆಲ್ಲಾ ಇಲ್ಲಿಯೇ ಕಳೆದು ಹೋಗುತ್ತದೇನೋ!! ಮನೆ ಮಾವನ ಹೆಸರಲ್ಲಿ ಇದ್ದರೂ, ಅಡಿಗೆ ಮನೆ ಮಾತ್ರ ಎಲ್ಲರೂ ಸೇರಿ ನನ್ನ ಹೆಸರಿಗೆ ಬರೆದುಕೊಟ್ಟು ಬಿಟ್ಟಿದ್ದಾರೆ!!
‘ಇದೊಂದು ಕೆಲಸ ಮುಗಿಯೋದೇ ಇಲ್ಲ, ಸಾಕು, ನಾ ಇವತ್ತಿಂದ ಅಡುಗೆ ಮಾಡೋದೇ ಇಲ್ಲ, ನಂಗೂ ಸಾಕಾಗಿಹೋಗಿದೆ ಜೀವನ, ಅಡುಗೆ ಮಾಡಲು ಆಲಸ್ಯ ಇರೋ ಹೆಣ್ ಮಕ್ಕಳ ಸಂಘ ಕಟ್ಬೇಕು ನಾನು, ಇಲ್ಲಾ ಯಾರಾದ್ರು ಕಟ್ಟಿದ್ರೆ ಹೋಗಿ ಸೇರಿಕೊಳ್ಳಬೇಕು’ ಎಂದುಕೊಳ್ಳುತ್ತಿದ್ದಾಗ ಫೋನ್ ರಿಂಗ್ ಆಯ್ತು. ನೋಡಿದ್ರೆ ನನ್ನ ಶಾಲೆಯ ಗೆಳತಿ, ಮಾತಿನ ಮಲ್ಲಿ ಮಲ್ಲಿಕಾ!! ‘ಏನು, ಎತ್ತ, ಹೇಗಿದ್ದೀಯಾ?’,ಎಂಬ ಕುಶಲೋಪಚರಿಗಳು ಮುಗಿದ ಮೇಲೆ,’ನಾವೆಲ್ಲ ಬಾಲ್ಯದ ಗೆಳತಿಯರು ಮೀಟ್ ಆಗ್ತಾ ಇದ್ದೇವೆ. ಒಂದ್ ಮೂರು ದಿನ ದೂರದ ಕಾಡಿನ ರೆಸಾರ್ಟ್ಗೆ ಹೋಗಿ, ಹಳೆಯದನ್ನೆಲ್ಲ ಮೆಲುಕು ಹಾಕಿ, ಹರಟೆ ಹೊಡೆದು, ಗಾಸಿಪ್ ಮಾಡಿ ಬರೋಣ ಅಂತ! ಅದಕ್ಕೆ ಎಲ್ರಿಗೂ ಕಾಲ್ ಮಾಡ್ತಾ ಇದೀನಿ. ನೀನು ಬಾ’,ಎಂದ್ಲು. ಎಲ್ಲರೂ ಬರುತ್ತಿದ್ದಾರೆ ಎಂದು ಎಲ್ಲರ ಹೆಸರುಗಳನ್ನು ಪಟಪಟನೆ ಹೇಳಿದಳು. ಅದನ್ನು ಕೇಳಿ ಹಾಗೂ ಅವಳ ಜೊತೆ ಮಾತಾಡಿ ನನಗೆ ಒಂದು ರೀತಿ ಖುಷಿ! ಜೊತೆಗೆ ಶಾಲೆ, ಅಲ್ಲಿನ ನನ್ನ ಗೆಳತಿಯರು, ಎಲ್ಲರೂ ಹಾಗೆ ಕಣ್ಣಮುಂದೆ ಹಾದು ಹೋದರು. ಆದರೆ ಇಲ್ಲಿ ಇರುವ ಜವಾಬ್ದಾರಿಗಳು ಒಂದೇ ಎರಡೇ?! ಎಲ್ಲವನ್ನು ಬಿಟ್ಟು ಹೋದರೆ ಅಷ್ಟೇ ಮುಗೀತು! ಎಲ್ಲರಿಗೂ ತೊಂದರೆ. ಅದನ್ನು ನೆನೆಯುತ್ತಾ,’ಇಲ್ಲ ಮಲ್ಲಿಕಾ! ನಾನು ತುಂಬಾ ಬ್ಯುಸಿ! ಕಷ್ಟ ಬರೋದು. ಅದು ಅಷ್ಟು ದಿನಕ್ಕೆ ಅಂದ್ರೆ ಆಗೋದಿಲ್ಲ”, ಎಂದೆ. ‘ಅಮ್ಮ!! ಸತಿ ಸಾವಿತ್ರಿಯ ಅಜ್ಜಿ ನೀನು!! ಗೊತ್ತಿತ್ತು ಹೀಗೆ ಹೇಳ್ತೀಯಾ ಅಂತ. ನಮಗೇನು ಮಕ್ಕಳು ಮರಿ ಇಲ್ವಾ?! ಜವಾಬ್ದಾರಿಗಳಿಲ್ವಾ?! ಒಂದೆರಡು ದಿನ ಬಿಡುವು ಮಾಡ್ಕೊಂಡು ಬಾ. ನಾವು ನಮ್ಮ ಕೆಲಸದ ಮಧ್ಯೆ ಬಿಡುವು ಮಾಡ್ಕೊಂಡು ರಿಲಾಕ್ಸ್ ಮಾಡಿದ್ರೆ ಒಳ್ಳೇದು. ಮಕ್ಕಳು-ಗಂಡ ಅಂತ ಜೀವನ ಜಂಜಾಟದಲ್ಲಿ ಖಾಲಿಯಾಗಿರುವ ನಮ್ಮ ಎನರ್ಜಿನ, ಪುನಃ ತುಂಬಿಸಿಕೊಂಡು ವಾಪಸ್ ಮನೆಗೆ ಹೋಗೋಣ!”, ಎಂದೆಲ್ಲಾ ಉಪದೇಶ ಮಾಡಿದಳು. ಕೊನೆಗೆ,’ನೋಡು ಯೋಚನೆ ಮಾಡು. ಮನೆಯಲ್ಲಿ ಕೇಳು. ಅವರೂ ಬೇಡ ಅನ್ನೋಲ್ಲ! ಜಸ್ಟ್ ೩ ದಿನ ಅಷ್ಟೇ. ನನಗೆ ಒಂದು ಮೆಸೇಜ್ ಹಾಕು’,ಎಂದು ಫೋನ್ ಇಟ್ಟಳು. ಬಾಲ್ಯದ ಗೆಳತಿಯರೆಲ್ಲಾ ಸೇರಿ ಮಾತನಾಡುವುದು, ಹರಟೆ ಹೊಡೆಯುವುದು, ಜಾಲಿ ಟ್ರಿಪ್ ಹೋಗುವುದು ಎಲ್ಲಾ ನೆನೆದು ಖುಷಿಯಾದ್ರೂ ಆಸೆಯಾದ್ರೂ, ಮನಸ್ಸಲ್ಲೇ ಮಂಡಿಗೆ ತಿನ್ನುವುದಷ್ಟೇ ನನ್ನ ಹಣೆಬರಹ ಎಂದುಕೊಂಡು ಸುಮ್ಮನಾದೆ.
ಬೆಳಿಗ್ಗೆ ಎದ್ದ ತಕ್ಷಣ ಅತ್ತೆ ಮಾವ, ಊರಲ್ಲಿ ಯಾರೋ ತೀರಿ ಹೋಗಿದ್ದಾರೆ, ನಾವು ಈಗಲೇ ಹೊರಡಬೇಕೆಂದು ಗಡಿಬಿಡಿಯಲ್ಲಿ ಹೊರಟರು. ಮಕ್ಕಳನ್ನು ಶಾಲೆಗೆ ಬಿಡಬೇಕು ಎಂದು ರೆಡಿಯಾಗುತ್ತಿದ್ದವಳಿಗೆ ಮೆಲ್ಲಗೆ ಬಂದ ಪತಿರಾಯ, ಮಕ್ಕಳನ್ನು ಇವತ್ತು ಸ್ಕೂಲಿಗೆ ಬಿಟ್ಟು ಬರ್ತೀನಿ ಎಂದಾಗ, ಅದರ ಹಿಂದೆ ಏನೋ ಇದೆ ಎಂದು ಅರಿವಾಯಿತು! ಅವರೇ ಹೇಳಲಿ ಎಂದು ಸುಮ್ಮನಾದೆ. ಹೇಗಿದ್ರು ಅತ್ತೆ ಮಾವ ಇಲ್ವಲ್ಲ. ಬೆಳಗ್ಗೆ ತಿಂಡಿನೇ, ಮಧ್ಯಾಹ್ನಕ್ಕೆ ಅಡ್ಜಸ್ಟ್ ಮಾಡಿದ್ರೆ ಆಯ್ತು! ಅಥವಾ ಇವರನ್ನು ಪೂಸಿ ಮಾಡಿ ಯಾವುದಾದರೂ ಹೋಟೆಲ್ ಗೆ ಹೋಗಿ ಒಳ್ಳೆ ಊಟ ಮಾಡಿ ಬರೋಣ ಎಂದು ಹಗಲು ಕನಸು ಕಾಣುತ್ತಿದ್ದವಳಿಗೆ, ಮಕ್ಕಳನ್ನು ಶಾಲೆಗೆ ಬಿಟ್ಟು ಬಂದ ಪತಿರಾಯ, ಕೈಯಲ್ಲಿ ಕಪ್ಪು ಕವರ್ ತಂದದ್ದನ್ನು ನೋಡಿ ಪೆಚ್ಚಾದೆ! ಮಕ್ಕಳನ್ನು ಸ್ಕೂಲಿಗೆ ಡ್ರಾಪ್ ಮಾಡಲು ಇದಾ ಕಾರಣ ಎಂದುಕೊಂಡೆ. ‘ಚಿನ್ನಾ!! ಅಪ್ಪ ಅಮ್ಮ ಇಲ್ಲ ಇವತ್ತು! ನಾನ್ ವೆಜ್ ತಿನ್ನಬೇಕು ಅಂತ ತುಂಬಾ ಆಸೆಯಾಗಿದೆ. ಒಳ್ಳೆ ಬಿರಿಯಾನಿ ಮಾಡ್ಬಿಡು!!’, ಎಂದು ರಾಗವಾಗಿ ಹೇಳಿದರು. ‘ಹೋಟೆಲ್ ಗೆ ಹೋಗೋಣ? ನೀವು ನಾನ್ ವೆಜ್ ತಿನ್ನಿ, ನಾನು ವೆಜ್’,ಎಂದೆ. ಆದ್ರೆ ಆಗಲೇ ಉತ್ತರ ಸಿದ್ಧವಿತ್ತು! ‘ನಾವು ಮನೆಯಲ್ಲಿ ನಾನ್ ವೆಜ್ ಮಾಡಲ್ಲ ಅಂತ, ನಾನು ಹೋಟೆಲ್ ನಲ್ಲೇ ತಿನ್ನೋದಲ್ವಾ! ಬೇಜಾರಾಗಿ ಬಿಟ್ಟಿದೆ. ಹೋಟೆಲ್ ಊಟ ಆರೋಗ್ಯಕ್ಕೆ ಒಳ್ಳೆಯದಲ್ಲಾ. ಅದಕ್ಕೆ ಮನೆಯಲ್ಲಿ ಮಾಡು ಅಂತ ಕೇಳ್ತಾ ಇದ್ದೀನಿ. ಅದೂ ಕಷ್ಟನಾ ನಿಂಗೆ?!’,ಎಂದು ತುಸು ಕೋಪಗೊಂಡ್ರು. ಸರಿ ನನ್ನ ಹಣೆ ಬರಹ ಇಷ್ಟೇ ಎಂದು ಮೂಗಿಗೆ ಮಾಸ್ಕ್ ಹಾಕಿ, ಕೈಗೆ ಗ್ಲೌಸ್ ಹಾಕಿ, ಕವರ್ ನಿಂದ ಆ ಹಸಿ ಮಾಂಸವನ್ನು ತೆಗೆದು ತೊಳೆಯಲು ಶುರು ಮಾಡಿದೆ!! ಯಾಕೆ ಇಷ್ಟು ಕಷ್ಟಪಡುತ್ತಿದ್ದಾಳೆ ಬಿರಿಯಾನಿ ಮಾಡೋಕೆ ಅನ್ಕೊಂಡ್ರಾ? ನಿಮ್ಗೆ ಗೊತ್ತಿಲ್ಲಾ ಅಲ್ವಾ?! ನಾವು ಅಪ್ಪಟ ಸಸ್ಯಾಹಾರಿಗಳು! ನಮಗೆ, ನಾನ್ ವೆಜ್ ತಿನ್ನದವರಿಗೆ ಇದನ್ನು ಮುಟ್ಟಲು ಸಹಾ ಅಸಹ್ಯ!! ವಾಸನೆಯಂತೂ ಆಗುವುದೇ ಇಲ್ಲ!! ಆದರೆ ಏನ್ ಮಾಡೋದು?! ಗಂಡನಿಗೆ ಇದು ಬೇಕೇ ಬೇಕು! ರುಚಿ ಇಷ್ಟ ಆಗಿದೆ. ಅತ್ತೆ ಮಾವಂಗೆ ಗೊತ್ತಾದ್ರೆ ಸುಮ್ನೆ ಬಿಡಲ್ಲ. ಅದಕ್ಕೆ ಅವರು ಇಲ್ದೆ ಇದ್ದಾಗ ಮಾಡ್ತೀನಿ! ಹೊಟ್ಟೆ ತೊಳೆಸುತ್ತದೆ! ಆದರೆ ಇದೆಲ್ಲಾ ನನ್ನ ಕರ್ತವ್ಯವಂತೆ! ಸತಿ ಧರ್ಮವಂತೆ! ಗಂಡನ ಆಸೆಗಳನ್ನು ಪೂರೈಸಬೇಕಂತೆ ಅಂತ ದೊಡ್ಡವರೂ ಹೇಳಿದ್ದಾರಲ್ಲ!
 ಕಳೆದ ಬಾರಿ ಮಾಡಿದ ಬಿರಿಯಾನಿ ಸಪ್ಪೆಯಾಗಿತ್ತು, ಒಂಚೂರು ಖಾರ ಜಾಸ್ತಿ ಆಗಬೇಕಿತ್ತು ಎಂದಿದ್ದರು. ನಾನು ರುಚಿ ನೋಡಲು ಆಗೋಲ್ಲವಲ್ಲ ಹಾಗಾಗಿ ಒಂದು ಅಂದಾಜಿನಲ್ಲಿ ಈ ಸಲ ಬಿರಿಯಾನಿಗೆ ಸರಿಯಾಗಿ ಎಲ್ಲಾ ಹಾಕಿ ರಿಪೇರಿ ಮಾಡಿದೆ! ಊಟಕ್ಕೆ ಬಡಿಸಿ ಹೇಗಿದೆ ಎಂದು ಕೇಳಿದಾಗ, ‘ಈಗ ಸರಿಯಾಗಿದೆ, ತುಂಬಾ ಚೆನ್ನಾಗಿ ಆಗಿದೆ,…’ ಎಂಬ ಮಾತನ್ನು ಕೇಳಿ ಖುಷಿಯಿಂದ ಹಾರುತ್ತಿರುವಾಗಲೇ ಅವರ ಮುಂದುವರೆದ ಮಾತು ಕೇಳಿ ಠುಸ್ ಎಂದು ಬಿದ್ದೆ!! ‘….ಅದು ಯಾಕೆ ಚೆನ್ನಾಗಿದೆ ಅಂದ್ರೆ, ಮಟನ್ ತುಂಬಾ ಎಳೆಯದಂತೆ. ಮಟನ್ ಶಾಪ್ ನವನು ಹೇಳಿದ್ದ, ತುಂಬಾ ರುಚಿಯಾಗಿರುತ್ತೆ ಸರ್ ಅಂತ. ಅದಕ್ಕೆ ಬಿರಿಯಾನಿ ಚೆನ್ನಾಗಾಗಿದೆ!!’,ಅಂದ್ರು. ‘ಅಯ್ಯೋ ವಿಧಿಯೇ! ರುಚಿಗೆ ಕಾರಣ ಆ ಕುರಿ ಮರಿಯೇ?!!! ಹೋಗ್ಲಿ ಬಿಡಿ, ಅಷ್ಟು ಕಷ್ಟಪಟ್ಟು ಅಡಿಗೆ ಮಾಡಿದ ನನ್ನನ್ನು ಹೊಗಳಿಲ್ಲವಾದ್ರೂ, ನಿಮಗಾಗಿ ತನ್ನನ್ನೇ ಬಲಿಕೊಟ್ಟ ಆ ಕುರಿಯನ್ನಾದರೂ ಹೊಗಳಿದರಲ್ಲ!’, ಎಂದುಕೊಂಡೆ.
 ಒಳ್ಳೆಯ ಮೂಡಿನಲಿದ್ದಾರಲ್ಲ ಎಂದು ಸ್ವಲ್ಪ ನುಲಿಯುತ್ತಾ, ‘ನನ್ನ ಫ್ರೆಂಡ್ ಮಲ್ಲಿಕಾ ಫೋನ್ ಮಾಡಿದ್ಲು. ಗೆಳತಿಯರೆಲ್ಲಾ ಮೀಟ್ ಆಗೋಣ. ೨-೩ ದಿನ ಜಾಲಿ ಟ್ರಿಪ್ ಹೋಗೋಣ ಅಂದ್ಲು. ಅದಕ್ಕೆ ನಿಮ್ಮನ್ನು ಒಂದು ಮಾತು ಕೇಳೋಣ ಅನ್ಕೊಂಡೆ’,ಎಂದೇ ಮೆಲ್ಲಗೆ. ಅದ ಕೇಳಿ ಗೊಳ್ಳನೆ ನಗುತ್ತಾ,’ನೀನು ಟ್ರಿಪ್ ಹೋಗುತ್ತಿಯಾ?! ಇಲ್ಲಿ ಮನೆ ಎಲ್ಲ ಯಾರ್ ನೋಡ್ತಾರೆ? ನಿಂಗೆ ಗೊತ್ತಲ್ವಾ. ಕಷ್ಟ ಬಿಡು. ಜವಾಬ್ದಾರಿ ಇಲ್ಲ ನಿಂಗೆ ಅಂದ್ಕೊತಾರೆ ಅಷ್ಟೇ! ಮಕ್ಕಳೂ ನಿನ್ನ ಬಿಟ್ಟು ಇರೋಲ್ಲ. ಎಲ್ಲಕ್ಕಿಂತಲೂ ಮಿಗಿಲಾಗಿ ನೀನು ಅವರನ್ನು ಬಿಟ್ಟಿರ್ತೀಯಾ?! ಅಕಸ್ಮಾತ್ ಹೋದ್ರು ಆ ಗಿಲ್ಟ್ ನಿಂಗೆ ಕಾಡ್ತಾನೆ ಇರುತ್ತೆ. ಏನಾದ್ರು ನೆಪ ಹೇಳಿ ಆಗಲ್ಲ ಅಂದ್ಬಿಡು!!’,ಎಂದು ಕೈ ತೊಳೆದು ಎದ್ದು ಹೋದರು.
 ರಾತ್ರಿ ಬಂದ ಅತ್ತೆ ಮಾವನಿಗೂ ಈ ವಿಷಯ ಕಿವಿಗೆ ಹಾಕಿದೆ. ನೋಡೋಣ ಅವರಾದ್ರು ಹೋಗಿ ಬಾ, ನಾವು ಇಲ್ಲಿ ಹೇಗೋ ನಿಭಾಯಿಸಿಕೊಳ್ಳುತ್ತೇವೆ ಅಂತಾರೇನೋ ಎಂಬ ಒಂದು ಸಣ್ಣ ಆಸೆಯಿಂದ! ಆದರೆ ನಾನು ವಿಷಯ ಹೇಳುತ್ತಿದ್ದಂತೆ ಅವರು,’ಅಯ್ಯೋ!! ಎಲ್ಲಾದರೂ ಉಂಟೆನಮ್ಮ! ಅದು ಮೂರು ದಿನ ನೀನು ಹೋದ್ರೆ ಇಲ್ಲಿ ಕಥೆ ಏನು? ಮಕ್ಳನ್ನು ಯಾರು ನೋಡ್ತಾರೆ! ಚಿಕ್ಕ ಮಕ್ಕಳು ಅಲ್ವಾ. ನಿನ್ ಗಂಡ ಬರಿ ಕೆಲಸದಲ್ಲೇ ಮುಳುಗಿರುತ್ತಾನೆ. ನೀನು ಅವನಿಗೆ ಸರಿಯಾದ ಸಮಯಕ್ಕೆ ಊಟ ತಿಂಡಿ ಎಲ್ಲಾ ಪೂರೈಸ್ತಿಯಾ. ಇಲ್ಲ ಅಂದ್ರೆ ಊಟ ತಿಂಡಿ ನೆನಪೇ ಇರೋಲ್ಲ ಅವನಿಗೆ. ಅಕಸ್ಮಾತ್ ನೀನು ಹೋದ್ರು ಇವರನ್ನೆಲ್ಲ ಬಿಟ್ಟು ಇರೋಕೆ ನಿಂಗೇ ಆಗಲ್ಲ ಕಣಮ್ಮ! ಪಾಪಪ್ರಜ್ಞೆಯಿಂದ ಕೊರಗಿ ವಾಪಸ್ ಬಂದ್ಬಿಡ್ತೀಯಾ!! ಜನ ಸ್ವಾರ್ಥ ತಾಯಿ ಅಂತ ಹೇಳಿ ನಗ್ತಾರೆ ಕಣಮ್ಮ! ಬೇಕಾದ್ರೆ ಎಲ್ಲರೂ ಒಟ್ಟಿಗೆ ಫ್ಯಾಮಿಲಿ ಟ್ರಿಪ್ ಹೋಗಿ ಬರೋಣ. ಇಲ್ಲ ಅಂದ್ರೆ ಒಂದೆರಡು ದಿನ ನಿಮ್ಮಮ್ಮನ ಮನೆಗೆ ಹೋಗಿ ಬಾ’, ಎಂದು ಹೇಳುತ್ತಾ ಮಲಗಲಿಕ್ಕೆ ಹೋರಟು ಹೋದರು.
ಆ ಕ್ಷಣಕ್ಕೆ ಅವರೆಲ್ಲ ಹೇಳಿದ್ದು ಸತ್ಯವೇನೋ ಎನಿಸಿಬಿಟ್ಟಿತ್ತು!! ‘ಅಯ್ಯೋ, ಹೌದಲ್ವಾ ಎಲ್ಲರಿಗೂ ಕಷ್ಟ. ಮಕ್ಳು ನನ್ನ ಬಿಟ್ಟಿರೋದು ಕಷ್ಟ ಆಗಬಹುದು’, ಎಂದುಕೊಂಡು ಕೆಲಸದಲ್ಲಿ ತಲ್ಲೀನಳಾದೆ.
 ಆದರೆ ರಾತ್ರಿ ಮಲಗಲು ಹೋದಾಗ, ಪ್ರಶಾಂತವಾಗಿದ್ದ ಮನಸ್ಸಿನಿಂದ ಇದರ ಬಗ್ಗೆ ಯೋಚಿಸಲು ಶುರುಮಾಡಿದೆ. ಮಾವ ಹೇಳಿದ ಹಾಗೆ ಫ್ಯಾಮಿಲಿ ಟ್ರಿಪ್ ಗೆ ಹೋದ್ರೆ, ಅಲ್ಲೂ ಬರೀ ಇದೇ ಕೆಲಸ! ಜಾಗ ಬದಲು ಅಷ್ಟೇ! ಅತ್ತೆ-ಮಾವ, ಮಕ್ಕಳು-ಗಂಡ ಅಂತ ಅವರಿಂದೇನೆ ಇರಬೇಕು! ಅವರ ಬೇಕು ಬೇಡಗಳನ್ನು ಪೂರೈಸುತ್ತಾ. ಅಮ್ಮನ ಮನೆಗೆ ಹೋದರೆ, ಅವಳಿಗೂ ವಯಸ್ಸಾಗಿದೆ. ಅವಳು ಅಡಿಗೆ ಹಾಗೂ ಬೇರೆ ಕೆಲಸ ಮಾಡೋದ್ ನೋಡೋಕೆ ಆಗ್ದೆ, ನಾನೇ ಮಾಡ್ತೀನಿ. ಇಲ್ಲೂ ಬೇಯಿಸು, ಅಲ್ಲೂ ಬೇಯಿಸು!! ಒಲೆ ಮುಂದೆ ನಿಂತು ಸಾಕಾಗುತ್ತೆ! ಜೊತೆಗೆ ನನ್ನ ಇಬ್ಬರು ಮಕ್ಕಳೂ ಇರ್ತಾರೆ. ಅವರನ್ನು ನೋಡ್ಕೋಬೇಕು. ಎಲ್ಲೂ ನನಗೆ ರೆಸ್ಟ್ ಅಂತಾನೇ ಇಲ್ಲ!! ಏನೋ ಅಪರೂಪಕ್ಕೆ ಹೋಗ್ತಿನಿ ಅಂತ ಕೇಳಿದೆ. ಹೂಂ ಅಂತ ಹೇಳ್ಬೋದಿತ್ತಲ್ವಾ?! ಮದುವೆಯಾಗಿ ಇಷ್ಟು ವರ್ಷ ಆಗಿದೆ. ಒಬ್ಬಳೇ ಎಲ್ಲೂ ಹೋಗಿಲ್ಲ. ಮಕ್ಕಳು ಚಿಕ್ಕವರು, ಚಿಕ್ಕವರು ಅಂತ ಮನೆಯಲ್ಲೆ ಉಳಿದೆ. ಅದೇ ಗಂಡ ಆದ್ರೆ, ಬಿಸಿನೆಸ್ ಟ್ರಿಪ್, ಫ್ರೆಂಡ್ಸ್ ಜೊತೆ ಪಾರ್ಟಿ, ಟ್ರಿಪ್ ಅಂತ ಆಚೆ ಹೋಗ್ತಾನೆ ಇರ್ತಾರೆ. ಅತ್ತೆ ಮಾವನೂ ಅವರವರ ಸ್ನೇಹಿತರ ಜೊತೆ, ಆ ದೇವಸ್ಥಾನ ಅಥವಾ ಯಾತ್ರೆ ಎಂದು ಓಡಾಡ್ತಾನೆ ಇರ್ತಾರೆ. ಆದರೆ ನಾನು ಮಾತ್ರ ಎಲ್ಲೂ ಒಬ್ಬಳೇ ಹೋಗೋದೇ ಇಲ್ಲ. ಅವರೇನು ನನ್ನತ್ರ ಹೋಗ್ಲಾ ಅಂತ ಕೇಳಲ್ಲ! ಹೋಗ್ತಿದೀವಿ ಅಂತ ಹೇಳ್ತಾರೆ. ಈಗ ನಾನು ಕೇಳಿದಾಗ, ಸುಲಭವಾಗಿ ಬೇಡ ಅಂದು ಬಿಟ್ರು!!
 ಯಾಕೋ ಮನಸ್ಸಿಗೆ ಬೇಜಾರಾಯ್ತು! ಯಾರೂ ನನ್ನ ಬಗ್ಗೆ ಚಿಂತೆ ಮಾಡಲ್ವಲ್ಲ ಅಂತ ಅನ್ನಿಸ್ತು! ನನ್ನನ್ನ ‘ಟೇಕ್ ಇಟ್ ಫಾರ್ ಗ್ರಾಂಟೆಡ್’, ಅಂತಾರಲ್ಲಾ ಹಾಗೆ ತಗೊಂಡಿದ್ದಾರೇನೋ ಅಂತ ಅನ್ನಿಸ್ತು!! ತಲೆಯೊಳಗೆ ಏನೇನೋ ಕೊರೆಯಲು ಶುರುವಾಯ್ತು!! ಮದುವೆಗೆ ಮುಂಚೆ ಅಡಿಗೆಮನೆಗೆ ಯಾವತ್ತೂ ಕಾಲಿಟ್ಟಿರಲಿಲ್ಲ! ಆದ್ರೂ ಬೇಗ ಅಡಿಗೆ ಕಲಿತೆ. ಎಲ್ಲಾದಕ್ಕೂ, ಎಲ್ಲಾರಿಗೂ ಹೊಂದಿಕೊಂಡು ಹೋದೆ. ಎಲ್ಲರಿಗೂ ಅಡ್ಜಸ್ಟ್ ಆದೆ. ಹೆಣ್ಣೆ ಅಡ್ಜಸ್ಟ್ ಆಗ್ಬೇಕಂತಲ್ಲ!! ಅಷ್ಟೆಲ್ಲ ಅಡಿಗೆ ಕಲಿತು ಮಾಡಿದ್ರುನೂ ಚೆನ್ನಾಗಿದೆ ಅಂತ ಬಾಯಿ ತುಂಬಾ ಹೇಳೋದಿಲ್ಲ! ಪತಿಗಾಗಿ ಚೆನ್ನಾಗಿ ಸೀರೆ ಉಟ್ಟು ರೆಡಿಯಾದ್ರು, ಚೆನ್ನಾಗಿ ಕಾಣಿಸ್ತಿದ್ದೀಯ ಅಂತಾನೂ ಹೇಳಲ್ಲ ಮಾರಾಯ!! ನಾನಾಗಿಯೇ ಕೇಳಿದ್ರೆ, ಅದನ್ನು ಬಾಯಿ ಬಿಟ್ಟು ಬೇರೆ ಹೇಳಬೇಕಾ ಎಂಬ ಹಾರಿಕೆಯ ಉತ್ತರ! ಅಲ್ಲಾ ನಾನ್ ಕೇಳೋದು, ಇವರ ಆಫೀಸ್ ನಲ್ಲಿ ಚೆನ್ನಾಗಿ ಕೆಲಸ ಮಾಡಿದಾಗ, ಅದನ್ನು ಹೊಗಳಲಿಲ್ಲ ಅಂದ್ರೆ ಎಷ್ಟು ಬೇಜಾರ್ ಮಾಡ್ಕೊಂಡಿರ್ತಾರೆ!! ಸಂಬಳ ಜಾಸ್ತಿ ಮಾಡ್ಲಿಲ್ಲ, ಪ್ರಮೋಷನ್ ಕೊಡ್ಲಿಲ್ಲ ಎಂದಾಗೆಲ್ಲ ಬೇಜಾರ್ ಮಾಡ್ಕೊಂಡಿರ್ತಾರೆ, ನೊಂದ್ಕೋತಾರೆ! ನಮಗೂ ಅನ್ವಯಿಸಲ್ವಾ ಅದು??!! ಅದು ಅಡಿಗೇನೆ ಇರಲಿ, ಅಥವಾ ಬೇರೆ ಮನೆ ಕೆಲಸನೇ ಇರಲಿ. ಚೆನ್ನಾಗಿ ಇದ್ದಾಗ ಬಾಯಿ ತುಂಬಾ ಹೊಗಳಿದ್ರೆ ಇವರಿಗೆ ಏನು ತೊಂದರೆ?! ಕೇಳಿ ನಾವು ಖುಷಿ ಪಡಬಹುದು ಅಲ್ವಾ! ನಮಗೇನು ಸಂಬಳ ಕೊಡ್ತಾರಾ?! ಪ್ರಮೋಷನ್ ಇದ್ಯಾ?! ಒಂದೆರಡು ಹೊಗಳಿಕೆ ಮಾತು ಕೇಳಿದರೆ ನಾವು ಕೆಲಸ ಮಾಡಿದ್ದಕ್ಕೂ ಸಾರ್ಥಕ ಅನ್ಸುತ್ತೆ. ನಾಳೆ ಮಾಡೋಕು ಅದು ಪ್ರೋತ್ಸಾಹ ಕೊಡುತ್ತೆ ಅಲ್ವಾ?!!
ಇವರಿಗೆಲ್ಲ ನಾನು ತಲೆಗೆ ಎಣ್ಣೆ ಹಾಕಬೇಕು, ಬಣ್ಣ ಹಾಕಬೇಕು! ಅದೇ ನನಗೆ ಹಾಕಿಕೊಡಿ ಎಂದ್ರೆ, ಅದೆಲ್ಲ ನನಗೆ ಬರೋಲ್ಲ!! ಕಲ್ತಿಲ್ಲ ಎಂದು ಜಾರಿಕೊಳ್ಳುತ್ತಾರೆ! ನಾನೇನು ಅದರ ಕೋರ್ಸ್ ಮಾಡಿ ಬಂದಿದ್ದೀನಾ?!!! ನಾನು ಮನೆಯವರಿಗೋಸ್ಕರ ಎಲ್ಲಾ ಕಲಿತಿಲ್ವಾ! ನಿನಗೋಸ್ಕರ ಮನೆಕೆಲಸಕ್ಕೆ ಅಂತ ಕೆಲಸದವಳನ್ನೂ ಇಟ್ಟಿದ್ದೀವಿ ಅಂತಾರೆ! ಅಲ್ಲ, ನೀವೆ ಹೇಳಿ?! ನಾನೊಬ್ಬಳೇನಾ ಈ ಮನೆಯಲ್ಲಿ ಇರುವುದು! ಅದರಿಂದ ನನ್ನೊಬ್ಬಳಿಗೇನಾ ಅನುಕೂಲ?!
ಹೀಗೆ, ಈ ನ್ಯಾಯ-ಅನ್ಯಾಯದ ಆಲೋಚನೆಗಳು ತಲೆಯೊಳಗೆ ಹರಿದಾಡಲು ಶುರು ಮಾಡಿದವು! ಯಾಕೋ ಇವೆಲ್ಲ ಒಟ್ಟಿಗೆ ಸೇರಿ ನನಗೆ ಇಲ್ಲದೇ ಇರೋ ಮೊoಡ, ಭಂಡ ಧೈರ್ಯ ತಂದ್ಕೊಟ್ಟವು!! ಹೋಗೆ ಹೋಗ್ಬೇಕು ಅಂತ ನಿರ್ಧಾರ ಮಾಡಿಕೊಂಡೆ! ಒಂದ್ ಮೂರು ದಿನ ತಾನೆ. ಮಕ್ಕಳಿಗೆ ಸರಿಯಾಗಿ ಅರ್ಥ ಮಾಡಿಸಿ ಹೇಳಿದ್ರೆ ಗ್ಯಾರಂಟಿ ಖುಷಿ ಪಡುತ್ತಾರೆ. ಈ ದೊಡ್ಡವರ ಹಾಗೆ ಕೊಂಕು ನುಡಿಯಲ್ಲ! ಬರುವಾಗ ಅವರಿಗೆ ಏನಾದ್ರು ತಂದ್ರೆ, ನಾನು ಅವರನ್ನು ಬಿಟ್ಟು ಹೋಗಿದ್ದನ್ನೂ ಮರೆತುಬಿಡುತ್ತಾರೆ. ಅತ್ತೆ ಮಾವ ಇಬ್ರು ಒಂದೆರಡು ದಿನ ಗರಂ ಆಗಿ ಗುರ್ ಗುರ್ ಎನ್ನುತ್ತಾರೆ. ಹಾಗೆ ನನ್ನ ಪತಿ ದೇವರು ಮುನಿಸಿಕೊಂಡವರಂತೆ ನಟಿಸುತ್ತಾರೆ!! ಮನೆಯಲ್ಲಾ ಸ್ವಲ್ಪ ಆಚೆ-ಈಚೆ ಆಗಿರುತ್ತೆ. ಪರವಾಗಿಲ್ಲ ಬಂದು ಕ್ಲೀನ್ ಮಾಡ್ಕೋಬಹುದು. ಮಲ್ಲಿಕಾ ಹೇಳಿದ ಹಾಗೆ, ನಾನು ಸ್ವಲ್ಪ ರಿಬೂಟ್ ಆಗ್ಬೇಕು. ರಿಲ್ಯಾಕ್ಸ್ ಆಗ್ಬೇಕು. ಇವರನ್ನೆಲ್ಲ ಹೋಗ್ಲಾ ಅಂತ ಕೇಳಿದ್ರೆ, ಇಲ್ದೆ ಇರೋದನ್ನೆಲ್ಲ ಹೇಳಿ, ಪಾಪ ಪ್ರಜ್ಞೆ ಬಂದು ನಾನು ಹೋಗದಂತೆ ಮಾಡುತ್ತಾರೆ! ನಾನಿಲ್ಲ ಅಂದ್ರೆ ಮಕ್ಕಳಿಗಲ್ಲ, ಈ ಮನೆಯ ದೊಡ್ಡವರಿಗೆ ತೊಂದರೆ!! ಏಕೆಂದರೆ ನಾನು ಮನೆಯಲ್ಲಿ ಇಲ್ಲ ಅಂದ್ರೆ, ಅವರ ಜೀವನ ಆರಾಮವಾಗಿ ಸಾಗೋಲ್ಲ! ವಿವಿಧ ರೀತಿಯ ಭಕ್ಷ್ಯಭೋಜನಗಳು, ಇತರ ಲಕ್ಷುರಿಗಳು ಇರುವುದಿಲ್ಲ!! ಅದಕ್ಕೆ ಮಕ್ಕಳ ನೆಪ ಹೇಳಿ ನನ್ನ ಸ್ವಾರ್ಥಿ ಎಂದು ಕರೆದು, ಪಾಪ ಪ್ರಜ್ಞೆಯಿಂದ ನಾನು ಹೋಗದಂತೆ ಮಾಡುತ್ತಾರೆ ಅಷ್ಟೇ.
ಮದುವೆಯಾಗಿ ಇಷ್ಟು ವರ್ಷ ಆದ್ ಮೇಲೆ ಅರ್ಥ ಆಗಿದ್ದು ಏನು ಅಂದ್ರ, ನಮಗೆ ನಾವೇ ಮಿಡಿಯಬೇಕು ತುಡಿಯಬೇಕು. ನಾನೇ ಈ ವಿಷಯವಾಗಿ ನಿರ್ಧಾರ ತಗೋಬೇಕು ಅಂದುಕೊಂಡೆ. ಭಾವುಕವಾಗಿ ಯೋಚಿಸಿದ್ರೆ ಹೋಗೋದು ಬೇಡ ಅನ್ಸುತ್ತೆ. ಆದ್ರೆ ಪ್ರ್ಯಾಕ್ಟಿಕಲ್ ಆಗಿ ಯೋಚಿಸಿದಾಗ, ಹೋದ್ರೆ ತಪ್ಪಿಲ್ಲ ಅನ್ಸುತ್ತೆ!
ಆಗಲೇ ಸಮಯ ೧೨ ಆಗಿತ್ತು. ಪತಿರಾಯ ಹಾಸಿಗೆಗೆ ಬರೋಕೆ ಮುಂಚೆ ಫೋನ್ ತಗೊಂಡು ಮಲ್ಲಿಕಾಗೆ,” ಐ ಯಾಮ್ ಇನ್!!!”,ಎಂದು ಮೆಸೇಜ್ ಹಾಕಿ ನೆಮ್ಮದಿಯಿಂದ ಮಲಗಿದೆ!!
*************************
21/10/2022
Momspresso Kannada
ವಿಷಯ:
‘ಇದೊಂದು ಕೆಲಸ ಮುಗಿಯೋದೇ ಇಲ್ಲ, ಸಾಕು, ನಾ ಇವತ್ತಿಂದ ಅಡುಗೆ ಮಾಡೋದೇ ಇಲ್ಲ, ನಂಗೂ ಸಾಕಾಗಿಹೋಗಿದೆ ಜೀವನ, ಅಡುಗೆ ಮಾಡಲು ಆಲಸ್ಯ ಇರೋ ಹೆಣ್ ಮಕ್ಕಳ ಸಂಘ ಕಟ್ಬೇಕು ನಾನು ‘

Leave a Reply

Your email address will not be published. Required fields are marked *