“ಅವರೂ ನನ್ನ ಅಮ್ಮನಂತೆ ಎಂದು ನಾನು ಭಾವಿಸಿದ್ದೆ, ಅವರೂ ನನ್ನನ್ನು ಮಗಳಂತೆ ನೋಡಿಕೊಳ್ಳಬೇಕಿತ್ತು”
#ಸಾಲುನಮ್ಮದುಬರಹನಿಮ್ಮದು ವಿಷಯಕ್ಕೆ ಬರೆದದ್ದು.
***********************************
‘ನನಗಂತೂ ಹೆಣ್ಮಕ್ಳಿಲ್ಲ!! ಸೊಸೆನೇ ನನ್ ಮಗ್ಳು ತರ ನೋಡ್ಕೋಬೇಕು ಅಂತ ಆಸೆ!!’,ಎಂದು ಹುಡುಗನ ತಾಯಿ ಹೇಳಿದಾಗ, ಮನೆಯಲ್ಲಿ ಸೇರಿದ್ದ ಎಲ್ಲಾ ನೆಂಟರಿಷ್ಟರು ಓಹೋ ಎಂದು ಖುಷಿ ಪಟ್ಟರು. ಅತ್ತೆಯಲ್ಲಿ ತಾಯಿ ಹುಡುಕುತ್ತಿದ್ದ “ಅನಾಥೆ”ಗೆ ಸ್ವರ್ಗಕ್ಕೆ ಮೂರೇ ಗೇಣು! ನಿಮ್ಮನ್ನು ಮಗಳಿಗಿಂತ ಚೆನ್ನಾಗಿ ನೋಡ್ಕೋತೀನಿ ಎಂದು ಅಲ್ಲಿ ಎಲ್ಲರ ಮುಂದೆ ಬಾಯಲ್ಲಿ ಹೇಳಲಾಗಲಿಲ್ಲ. ಆದರೆ ಮನಸ್ಸಿನಲ್ಲಿಯೇ ನಿರ್ಧರಿಸಿದೆ.
ಮಾತುಕತೆ ಮುಗಿದು ಮದುವೆ ದಿನ ಗುರುತು ಮಾಡಿ ಒಡವೆ ಕೊಳ್ಳಲು ಹೋದಾಗ, ಭಾವಿ ಅತ್ತೆ, ‘ಏನ್ ಬೇಕು ತಗೋ ಸಂಕೋಚ ಬೇಡ! ಹಾಗೆಯೇ ಮೂಗು ಚುಚ್ಚು, ನನ್ ಮಗನಿಗೆ ಹೇಳಿ ವಜ್ರದ್ದೆ ಹಾಕಿಸ್ತೀನಿ!!’,ಎಂದಾಗ ಸುತ್ತ ಇದ್ದ ಸಂಬಂಧಿಗಳು, ಅಂಗಡಿಯವರು ಕಣ್ಣರಳಿಸಿ ನೋಡಿದ್ದರು. ಅತ್ತೆಯ ಪ್ರೀತಿಗೆ ಈ ಹರಿಣಿಯ ಎದೆಯೊಳಗೇ ನವಿಲು ನರ್ತಿಸಿದ್ದು ಸುಳ್ಳಲ್ಲ! ಒಟ್ನಲ್ಲಿ ನನ್ನ ಮದುವೆ ಸಂಭ್ರಮದಲ್ಲಿ ಹುಡುಗನಿಗಿಂತ, ಅವನ ತಾಯಿಯೇ ಹೈಲೈಟ್ ಆದರು. ನಮ್ಮ ನೆಂಟರಿಷ್ಟರ ಮನದಲ್ಲಿ ಅವರ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯ ಮೂಡಿತು.
ಇಷ್ಟೆಲ್ಲಾ ಆದಮೇಲೆ ಮನೆಗೆ ಯಾರಾದರೂ ಬರಲಿ, ಹೋಗಲಿ ಎಲ್ಲರೂ ಒಂದೇ ಹೇಳುವುದು,’ ಅಂತಹ ಹುಡುಗ ನಿನಗೆ ಸಿಗಬಹುದು. ಆದರೆ ಆ ರೀತಿ ಒಳ್ಳೆ ಅತ್ತೆ ಪಡೆಯೋಕೆ ಪುಣ್ಯ ಮಾಡಿದ್ದೆ!! ಅವರು ಜಾಸ್ತಿ ಓದಿಲ್ಲ ಬರೆದಿಲ್ಲ. ಪ್ರಪಂಚ ಜ್ಞಾನ ಗೊತ್ತಿಲ್ಲ. ತುಂಬಾ ಮುಗ್ಧತೆ ಇದೆ!! ಚೆನ್ನಾಗ್ ನೋಡ್ಕೋ’, ಎಂದು ಎಲ್ಲರೂ ಹೇಳುವವರೇ. ನನಗೂ ಒಳಗೊಳಗೆ ಖುಷಿ. ಎಲ್ಲಾ ಹೆಣ್ಣುಮಕ್ಕಳ ಹಾಗೆ ನನಗೂ ಗಂಡ, ಅತ್ತೆ, ಮದುವೆಯಾಗುವ ಮನೆಯವರ ಬಗ್ಗೆ ಭಯ ಇತ್ತು. ಇನ್ನು ಯಾವ ಭಯ ಬೇಡ ಅಂದ್ಕೊಂಡೆ.
ಇಷ್ಟು ವರ್ಷಗಳಿಂದ ತಾಯಿ ಪ್ರೀತಿಗಾಗಿ ಹಪಹಪಿಸುತ್ತಿತ್ತು ಮನಸ್ಸು! ಹಾಗಂತ ನಾನೇನು ತಾಯಿ ಇಲ್ಲದ ತಬ್ಬಲಿಯಲ್ಲ. ಎಲ್ಲಾ ಇದ್ರೂನು ಕಾರಣಾಂತರದಿಂದ ನಾನು ಬೇರೆ ಕಡೆ ಬೆಳೆದೆ. ಅವರ ಪ್ರೀತಿ ಸಿಗಲೇ ಇಲ್ಲ. ಅಮ್ಮನ ಆ ವಾತ್ಸಲ್ಯ, ಪ್ರೀತಿ ಮಮಕಾರ…, ಅದೇನೇನೋ ಹೇಳ್ತಾರಲ್ಲ ಅದೆಲ್ಲ ಯಾವತ್ತೂ ನಾನು ಅನುಭವಿಸಲೇ ಇಲ್ಲ! ಒಂದಿಷ್ಟು ವಯಸ್ಸಿಗೆ ಬರುವವರೆಗೂ ನನಗೆ ತಾಯಿ ಇಲ್ಲ ಎಂದು ತಿಳಿದುಕೊಂಡಿದ್ದೆ. ಆಮೇಲೆ ತಿಳಿಯಿತು. ಹಾಗಂತ ಯಾರನ್ನು ದೂರುವುದಿಲ್ಲ! ಅವರಿಗೆ ಅವರದೇ ಆದ ಕಾರಣಗಳಿತ್ತು!! ಅವರ ಪ್ರೀತಿ ಕೈಗೆಟುಕದ ಚಂದ್ರನಂತೆ ಎಂದು ಅರ್ಥವಾಯಿತು! ಸಮಾಧಾನ ಮಾಡಿಕೊಂಡಿದ್ದರೂ ಅವರ ಪ್ರೀತಿಯನ್ನು ಬೇರೆಯವರಲ್ಲಿ ಹುಡುಕುತ್ತಿದ್ದೆ! ಈಗ ಆಸೆ ಪೂರೈಸುವ ಕಾಲ ಕೂಡಿ ಬಂದಿತ್ತು!
‘ಅಮ್ಮ, ಅಮ್ಮ’, ಎಂದು ಬರಿ ಬಾಯಲ್ಲಿ ಕರೆಯೋದಷ್ಟೇ ಅಲ್ಲ, ಮನಸಲ್ಲೂ, ಹೃದಯದಲ್ಲೂ ಹಾಗೆ ಭಾವಿಸಿದೆ. ಆ ಸ್ಥಾನ ಕೊಟ್ಟೆ. ಅವರ ರೀತಿ, ನಾನೆಲ್ಲೂ ಅವರನ್ನು ಅಮ್ಮನ ಹಾಗೆ ನೋಡಿಕೊಳ್ಳುತ್ತೇನೆ ಎಂದು ಯಾರ ಮುಂದೆಯೂ ಬಾಯಿ ಬಿಟ್ಟು ಹೇಳಿರಲಿಲ್ಲ. ಆದರೆ ಅದನ್ನು ಪಾಲಿಸಿದ್ದೆ. ಹಾಗೆ ಅಮ್ಮನ ವಾತ್ಸಲ್ಯಕ್ಕೆ ನಾನು ಹಾತೊರೆಯುತ್ತಿದ್ದೆ! ಹರಿಣಿ ವೆಡ್ಸ್ ಹರ್ಷ!! ಕೊನೆಗೆ ಮದುವೆಯೂ ಆಯ್ತು.
**********************************
ಮದುವೆ ಮುಹೂರ್ತದ ಸಮಯದಲ್ಲಿ ಗಂಡು ಹೆಣ್ಣಿನ ಮಧ್ಯೆ, ಒಂದು ಪರದೆ ಇಟ್ಟಿರುತ್ತಾರೆ! ಆ ಪರದೆ ಸರಿಸುತ್ತಾರೆ. ಆಮೇಲೆ ತಾಳಿ ಕಟ್ಟಿ ಮದುವೆ ಮುಗಿಸುತ್ತಾರೆ. ಹಾಗೆಯೇ ನಮ್ಮ ಮದುವೆಯಾದ ಮೇಲೆ ಎಲ್ಲ ಮುಖಗಳು ಒಂದೊಂದಾಗಿ ಕಳಚುತ್ತಾ ಹೋಯಿತು!! ನಾ ಅಂದು ಕೊಂಡಿದ್ದೆಲ್ಲ ಸತ್ಯವಲ್ಲ ಎಂದು ಅರಿವಾಗಲು ಬಹಳ ಸಮಯ ಹಿಡಿಯಲಿಲ್ಲ!!
ಮದುವೆ ದಿನ ಮನೆ ತುಂಬಿಸಿಕೊಂಡಾದ ಮೇಲೆ, ಶಾಸ್ತ್ರಗಳ ನೆಪದಲ್ಲಿ ರಾತ್ರಿಯಾದರೂ ಕೂರಲು ಪುರುಸೊತ್ತಿರಲಿಲ್ಲ. ಕೊನೆಗೆ ಎಲ್ಲಾ ಮುಗಿದ ಮೇಲೆ ಮಲಗಲು ರೂಮಿಗೆ ಹೋದರೆ, ದಿಂಬು, ಹೊದಿಕೆ ಎಂತ ಸಹ ಇರಲಿಲ್ಲ. ರೂಮಿಂದ ಆಚೆ ಬಂದು ನೋಡಿದರೆ ನೆಂಟರಿಷ್ಟರೆಲ್ಲರೂ ಹೊದ್ದು ಮಲಗಿದ್ದಾರೆ. ಅಷ್ಟು ದೊಡ್ಡ ಮನೆಯಲ್ಲಿ, ಮನೆ ತುಂಬಾ ಜನರಿದ್ದರೂ, ಹೊಸದಾಗಿ ಬಂದವಳ ಬಗ್ಗೆ ಯಾವ ಅಕ್ಕರೆಯೂ ಅಲ್ಲಿ ಇರಲಿಲ್ಲ! ಆಗಲೇ ಆ ಮನೆಯಲ್ಲಿ ನನ್ನ ಮುಂದಿನ ದಿನಗಳ ಬಗ್ಗೆ ಸುಳಿವು ಸಿಕ್ಕಿತ್ತು! ನಂತರ ಹನಿಮೂನ್ ಗೆ ಹೊರಟು ನಿಂತಾಗ, ನಾನು ಜೊತೆಯಲ್ಲಿ ಬರುತ್ತೇನೆ ಎಂದು ಅತ್ತೆ ಹೇಳಿದಾಗ, ಒಂದು ಕ್ಷಣ ನಾನು ಅವಕ್ಕಾದ್ರು, ಪಾಪ ಎಲ್ಲರೂ ಹೇಳೋ ಹಾಗೆ ಇವರಿಗೆ ಹನಿಮೂನ್ ಅಂದ್ರೆ ಏನು ಎಂದು ತಿಳಿಯದಷ್ಟು ಮುಗ್ಧತೆ ಎಂದುಕೊಂಡೆ!
ನನ್ನ ಸ್ವಂತ ತಾಯಿ ಆಗಿದ್ರೆ ಏನೆಲ್ಲಾ ಮಾಡ್ತಿದ್ದೆ ಅದೆಲ್ಲವನ್ನು ಮಾಡಿದೆ. ವಯಸ್ಸಾದವರು, ಶಕ್ತಿ ಬರಲಿ ಎಂದು ವುಮೆನ್ ಹಾರ್ಲಿಕ್ಸ್, ಕೂದಲು ಸರಿ ನಿಲ್ಲುತ್ತಿಲ್ಲ ಎಂದು ತಲೆಗೆ ಶ್ಯಾಂಪೂ, ಜೆಲ್, ಹೊಸ ಸೀರೆ, ಚಪ್ಪಲಿ,…ಒಟ್ನಲ್ಲಿ ಹಣೆಗೆ ಇಡುವ ಪುಟ್ಟ ಬಿಂದಿಯಿಂದ ಹಿಡಿದು ಚಿನ್ನದ ಒಡವೆಗಳವರೆಗೂ ಎಲ್ಲದರ ಬಗ್ಗೆಯೂ ಕಾಳಜಿ ವಹಿಸಿದೆ. ಇದನ್ನೆಲ್ಲಾ ನೋಡಿ, ‘ನಿನ್ನಂತ ಸೊಸೆ ಸಿಕ್ಕರೆ ಪ್ರಪಂಚದಲ್ಲಿ ಅತ್ತೆ ಸೊಸೆ ಜಗಳವೇ ಇರುವುದಿಲ್ಲ!!’, ಎಂದು ನನ್ನ ಸಹೋದ್ಯೋಗಿಗಳೆಲ್ಲ ರೇಗಿಸುತಿದ್ದರು.
ಕೆಲಸಕ್ಕೆ ಹೋಗುವ ಒಂದು ಹೆಣ್ಣಿಗೆ, ಮನೆ ಕೆಲಸ, ಅಡುಗೆ ಕೆಲಸ ಎಲ್ಲವನ್ನು ಮಾಡಿ ಮುಗಿಸಿ ಹೋಗುವುದು ಸುಲಭವಲ್ಲ. ಕೋಳಿ ಕೂಗುವ ಮುಂಚೆಯೇ ಏಳಬೇಕಿತ್ತು. ರಾತ್ರಿ ಬಂದ ಮೇಲು ಮನೆಯೊಳಗೆ ದುಡಿಯಲೇಬೇಕಿತ್ತು! ನನಗೆ ಬರುತ್ತಿದ್ದ ಸಂಬಳಕ್ಕೆ ಎಲ್ಲ ಕೆಲಸಕ್ಕೂ ಸಹಾಯಕ್ಕೆ ಇಡಬಹುದಿತ್ತು. ಆದರೆ ಕೆಲಸದವರೆಲ್ಲ ಮೂರು ದಿನಕ್ಕೆ ಮಾಯವಾಗುತ್ತಿದ್ದರು. ಅದರ ಹಿಂದೆ ಅಮ್ಮನ ಅರ್ಥಾತ್ ಅತ್ತೆಯ ಕೈಚಳಕ ಇದೆ ಎಂದು ಅರ್ಥವಾಗಲೇ ಇಲ್ಲ!
ಮದುವೆ ನಂತರ ನನ್ನೆಲ್ಲಾ ಒಡವೆಗಳನ್ನು ಅತ್ತೆ, ನಮ್ಮ ಮನೆಗೆ ಸೇರಿದ್ದು ಎಂದು ತೆಗೆದುಕೊಂಡರು. ಸರಿ ಎಂದೆ! ಓದುವ ಆಸೆ ಇದ್ದರೂ, ಓದಲು ಹೋಗಿ, ಅತ್ತೆ ಜೊತೆ ಜಾಸ್ತಿ ಸಮಯ ಕಳೆಯಲಾಗದೆ ನಮ್ಮ ನಡುವಿನ ಬಾಂಧವ್ಯಕ್ಕೆ ಧಕ್ಕೆ ಬರಬಹುದು, ಮನಸ್ತಾಪ ಉಂಟಾಗಬಹುದು ಎಂದು ಆ ಆಸೆಯನ್ನು ಅಲ್ಲೇ ಚಿವುಟಿ ಹಾಕಿದೆ.
ಮದುವೆ ದಿನಾಂಕ ನಿಗದಿ ಪಡಿಸಿದ ದಿನದಿಂದ ಪ್ರತಿ ದಿನಾ ಫೋನ್ ಮಾಡಲು ಶುರು ಮಾಡಿದ್ದೆ, ಪಾಪ ಬೆಳಗ್ಗೆಯಿಂದ ಸಂಜೆವರೆಗೂ ಮನೆಯಲ್ಲಿ ಅತ್ತೆ ಒಬ್ಬರೇ ಇರ್ತಾರೆ ಎಂದು! ಹಾಗೆಯೇ ನಮ್ಮಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯುವುದೆಂದು! ಯಾರು ಇಲ್ಲ ನೋಡ್ಕೊಳ್ಳೋರು ಎಂದು ಮುಂದೂಡಿದ್ದ ಎಲ್ಲಾ ವಯೋ ಸಹಜ ಚಿಕಿತ್ಸೆ/ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡ್ರು ಅತ್ತೆ. ಪ್ರೀತಿಯಿಂದ ಅವೆಲ್ಲದರ ಆರೈಕೆ ಮಾಡಿದೆ. ಎಲ್ಲಿಯೂ ಬೇಸರ ಪಟ್ಟುಕೊಳ್ಳಲಿಲ್ಲ. ನನ್ನಮ್ಮನಿಗೆ ಆಗಿದ್ದರೆ ನಾನು ನೋಡುತ್ತಿರಲಿಲ್ಲವೇ?! ಆದರೆ ಅವರ ಧೋರಣೆ ಇಷ್ಟವಾಗಲಿಲ್ಲ. ನನ್ನ ಮಕ್ಕಳು ದುಡ್ಡು ಕೊಟ್ಟು ನರ್ಸ್ ಇಟ್ಟಿರುವರು ಎನ್ನುವ ರೀತಿ ಇತ್ತು! ಆದರೂ ನಾನು ಬೇಸರ ವ್ಯಕ್ತಪಡಿಸಲಿಲ್ಲ. ಈ ಶಸ್ತ್ರ ಚಿಕಿತ್ಸೆಗಳು ಮೊದಲೇ ನಿಗದಿಯಾಗಿತ್ತು! ಅದಕ್ಕಾಗಿಯೇ ಹೆಣ್ಣು ನೋಡಿ ಮದುವೆಯನ್ನು ಕೊಂಚ ಮುಂಚೆಯೇ ಮುಗಿಸಿದ್ದು, ಏಕೆಂದರೆ ಸೊಸೆ ಬೇಕಲ್ಲ ನೋಡಿಕೊಳ್ಳಲು ಎಂದು ಯಾರಿಂದಲೋ ಆಮೇಲೆ ತಿಳಿಯಿತು!! ಅಷ್ಟೇ ಅಲ್ಲ! ಅಷ್ಟು ದೊಡ್ಡ ಬಳಗವಿದ್ದರೂ ಅಲ್ಲೆಲ್ಲ ಬಿಟ್ಟು, ಹೊರಗಿನಿಂದ ಹೆಣ್ಣು ತಂದಿದ್ದು ಇದೇ ಕಾರಣಕ್ಕೆ! ಅತ್ತೆ ಆಡಿಸಿದಂತೆ ಆಡುವುದಕ್ಕೊಂದು ಬೊಂಬೆ ಬೇಕಿತ್ತು!
ಇದರಿಂದೆಲ್ಲಾ ಅವರು ಚೇತರಿಸಿಕೊಂಡ ಮೇಲೆ ಅವರ ಉಳಿದ ರೂಪಗಳು ಒಂದೊಂದಾಗಿ ಆಚೆ ಬರತೊಡಗಿದವು! ಒಂದೇ ಹುತ್ತದಲ್ಲಿ ತರಾವರಿ ವಿಷ ಸರ್ಪಗಳಿದ್ದಂತೆ! ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವಂತಾಯಿತು ನನ್ನ ಪರಿಸ್ಥಿತಿ! ನೆಲದ ಮೇಲೆ ಒಂದು ಕೂದಲು ಸಿಕ್ಕಿದರೆ, ನಾನು ಕಸ ಸರಿ ಗುಡಿಸಿಲ್ಲ! ಮಿಕ್ಸಿ, ಸ್ಟವ್ ಕೆಟ್ಟು ಹೋದ್ರೆ ನಾನೇ ಕಾರಣ! ನಾನು ಅಡಿಗೆ ಮನೆ ಕಾಲಿಟ್ಟ ಮೇಲೆ ಎಲ್ಲಾ ಕೆಟ್ಟೋಯ್ತು ಅನ್ನೋ ಹಾಗೆ! ಮನೆಯಲ್ಲಿ ಕಳ್ಳ ಬಂದ್ರೆ ಅದಕ್ಕೆ ಕಾರಣ ನನ್ನ ಕಾಲ್ಗುಣ ಎನ್ನುವ ಹಂತದವರೆಗೆ ಹೋಯಿತು! ಶನಿವಾರ ಭಾನುವಾರ ರಜೆ ಎಂದು ಕಣ್ತುಂಬ ನಿದ್ರಿಸುವಂತಿಲ್ಲ! 5:00 ಗಂಟೆಗೆ ಬಂದು ಬಾಗಿಲು ಕುಟ್ಟುವುದು! ಹೊಸದಾಗಿ ಮದುವೆಯಾದವರು ಎಂದು ಎಲ್ಲಿಯೂ ಇಬ್ಬರೇ ಹೋಗುವಂತಿಲ್ಲ, ಕೂತು ಮಾತನಾಡುವಂತಿಲ್ಲ!
ನನ್ನ ಯಾವ ಸ್ನೇಹಿತೆ ಅಥವಾ ಸಂಬಂಧಿಕರ ಮನೆಗೆ ಹೋಗೋ ಹಾಗಿಲ್ಲ! ಕಡೆ ಪಕ್ಷ ಫೋನ್ನಲ್ಲಿ ಮಾತಾಡುವ ಎಂದರೆ, ಯಾರ ಜೊತೆ ಮಾತಾಡಿದ್ರು ಕದ್ದು ಕೇಳುವುದು! ಮಗ ಬಂದ ಮೇಲೆ ಯಾರೋ ಜೊತೆ ಮಾತಾಡ್ತಾ ಕೂತಿದ್ಲು ಎಂದು ಕೆಟ್ಟದಾಗಿ ಚಾಡಿ ಹೇಳೋದು!! ಮನೆಯ ಮನ ಶಾಂತಿಗೋಸ್ಕರ ಎಲ್ಲರ ಜೊತೆ ಸಂಪರ್ಕ ಕಳೆದುಕೊಂಡೆ! ನನ್ನವರೆಲ್ಲರಿಗೂ ನಾನು ವಿಲನ್ ಆದೆ! ನನ್ನ ಸ್ವಂತ ಅಮ್ಮನೇ ಆಗಿದ್ರೆ ನಾನು ಕೋಪ ಮಾಡಿಕೊಳ್ಳುತ್ತಾ ಇರಲಿಲ್ಲ ಅಲ್ವಾ ಎಂದು ಸುಮ್ಮನಾಗುತ್ತಿದ್ದೆ. ಅವರಿಗೆ ಇಷ್ಟ ಆಗೋ ಹಾಗೆ ಇದ್ದರೆ, ಒಂದು ದಿನ ಅವರೂ ನನ್ನನ್ನು ಪ್ರೀತಿ ವಾತ್ಸಲ್ಯದಿಂದ ನೋಡ್ಕೋಬಹುದು, ಮಗಳ ತರ ಕಾಣಬಹುದು ಎಂದು ಎಲ್ಲೋ ಒಂದು ಕಡೆ ಸ್ವಾರ್ಥ ಇತ್ತು!! ಮುಂದೆ ಎಲ್ಲವೂ ಸರಿಯಾಗುತ್ತದೆ ಎಂಬ ನಂಬಿಕೆಯೊಂದಿಗೆ ದಿನ ದೂಡುತ್ತಿದ್ದೆ.
ಆದರೆ ಎಷ್ಟೆಲ್ಲಾ, ಏನೆಲ್ಲಾ ಸರ್ಕಸ್ ಮಾಡಿದ್ರೂ ಯಾವುದೂ ಅವರಿಗೆ ಸಮಾಧಾನ ತಂದು ಕೊಡಲಿಲ್ಲ! ಒಂದು ಹೊಗಳಿಕೆಯ ಮಾತಿರಲಿ ಸದಾ ತೆಗಳುವುದು! ಎಲ್ಲಾದಕ್ಕೂ ಕೊಂಕು ನುಡಿಯುವುದು!! ಚೂರು ಅತ್ತರೆ ಸಾಕು, ಇಷ್ಟಕ್ಕೆಲ್ಲಾ ಅಳುವಷ್ಟು ಅಳುಮುಂಜಿಯೇ ನೀನು ಎನ್ನುವ ಕೊಂಕು ಮಾತು!! ನಾನು ನೋವು ನುಂಗಿಕೊಂಡಷ್ಟು ಅವರದ್ದು ಅತಿ ಆಯ್ತು. ಮಗನ ಹಿಂದೆ ಮಾತಾಡ್ತಿದ್ದವರು, ಸಮಯ ಕಳೆದಂತೆ ಮಗನ ಮುಂದೇನೆ ನನ್ನ ಚುಚ್ಚೋದಿಕ್ಕೆ ಶುರು ಮಾಡಿದರು! ಏನು ತಪ್ಪಿಲ್ಲದೆ ಹೆಂಡತಿಗೆ ತನ್ನಮ್ಮ ಹೀಗೆಲ್ಲಾ ಮಾಡುವುದನ್ನು ನೋಡಿ ಸಹಿಸಲಾಗದೆ ಮಗ ಒಮ್ಮೆ ಪ್ರಶ್ನಿಸಿದಾಗ, ಗೊಳೋ ಎಂದು ಅಳುತ್ತಾ, ಏನೋ ಮಾಟ ಮಾಡಿದ್ದಾಳೆ ಎಂದು ನಾಟಕ ಶುರುಮಾಡಿ ಅವರ ನೆಂಟರಿಷ್ಟರನ್ನೆಲ್ಲ ಸೇರಿಸಿದರು! ಹೆದರಿದ ಮಗ ಸುಮ್ಮನಾದ! ನಾನು ಸಹ ಅವರನ್ನು ಇನ್ನು ತಲೆ ಹಾಕಬೇಡಿ ಈ ವಿಷಯಕ್ಕೆ ಎಂದೆ!!
ಇನ್ನೊಬ್ಬಳು ಸೊಸೆ ಬಂದಾಗ ಸರಿ ಹೋಗಬಹುದು ಎಂಬ ಒಂದು ಸಣ್ಣ ಆಸೆ ಇತ್ತು. ಅವಳೂ ಬಂದಳು! ಆದರೆ ಅವಳು ಯಾರಿಗೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ! ಅವಳ ತವರು ಮನೆಯವರು ಜೋರಿದ್ದರು. ಹಾಗಾಗಿ ಅವಳ ಜೊತೆ ನಗುನಗುತ್ತಾ ಚೆನ್ನಾಗಿ ಇದ್ದರು. ಆದರೆ ಅವಳಿಗೆ ಎಲ್ಲರೊಟ್ಟಿಗೆ ಇರಲು ಇಷ್ಟವಾಗದೆ, ಬೇರೆ ಮನೆಯಲ್ಲಿ ಸಂಸಾರ ಹೂಡಿದಳು! ನನಗಿದ್ದ ಆ ಒಂದು ದಾರಿಯು ಮುಚ್ಚಿತ್ತು!! ನಾನು ಒಬ್ಬಳೇ “ಜಿಂಕೆ”, ಕ್ರೂರ ವ್ಯಾಘ್ರನಿರುವ ಕಾಡಿನಲ್ಲಿ!!
ಅತ್ತೆಯ ಕಾಟ ತಾರಕಕ್ಕೆ ಏರುತ್ತಾ ಹೋಯಿತು!ಈಗ ನಾನು ಒಂದೇ ಟಾರ್ಗೆಟ್ ಅವರಿಗೆ!! ಕುಂತ್ರೆ ತಪ್ಪು, ನಿಂತ್ರೆ ತಪ್ಪು!! ಮಾತಾಡಿದರೂ ತಪ್ಪು, ಮೌನವಾಗಿದ್ದರೂ ತಪ್ಪು! ನಾನು ಹುಟ್ಟಿದ್ದೆ ತಪ್ಪೇನೊ, ಈ ಮನೆಗೆ ಮದುವೆಯಾಗಿ ಬಂದಿದ್ದೆ ತಪ್ಪೇನೊ ಎನ್ನುವಷ್ಟು ರೋಸಿ ಹೋಗಿತ್ತು ಬದುಕು! ಏನೂ ಕಾರಣ ಇಲ್ಲದೆಯೂ, ತಂದೆ ತಾಯಿಯ ಬಗ್ಗೆ ಕೆಟ್ಟದಾಗಿ ಮಾತಾಡಲು ಶುರು ಮಾಡಿದ್ರು. ಅವರು ಜಗಳ ಮಾಡದ ದಿನವೇ ಇಲ್ಲ! ಕೊಂಕು ಮಾತಾಡದ ಕ್ಷಣವೇ ಇಲ್ಲ! ನನ್ನ ಪಾಡಿಗೆ ನಾನು ಸುಮ್ಮನಿದ್ದರೂ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದಕ್ಕೆ ಶುರು ಮಾಡಿದರು!!
ಕೊನೆಗೆ ಒಂದು ದಿನ ಯಾರು ಇಲ್ಲದಾಗ, ಕೈ ಮಾಡುವ ಹಂತಕ್ಕೆ ಬಂದರು!! ಸೂಕ್ಷ್ಮ ಸ್ವಭಾವದವಳಿಗೆ ಅದನ್ನು ಅರಗಿಸಿಕೊಳ್ಳಲಾಗಲಿಲ್ಲ! ದೊಡ್ಡ ಆಘಾತವಾಯಿತು! ಯಾಕೆ ಹೀಗೆಲ್ಲಾ ಆಗುತ್ತಿದೆ ಎಂದು ಅರ್ಥವೇ ಆಗಲಿಲ್ಲ! ಜೀವನವೇ ಬೇಜಾರಾಯ್ತು. ನನ್ನ ಮಾತುಗಳೇ ನಿಂತು ಹೋದವು! ಕೆಲವೊಮ್ಮೆ ದೇವಸ್ಥಾನದಲ್ಲಿ ಕುಳಿತು ನಾನೇನು ತಪ್ಪು ಮಾಡಿದೆ ಎಂದು ರೋದಿಸುತ್ತಿದ್ದೆ! ಯಾರೊಂದಿಗೂ ಹೇಳಿಕೊಳ್ಳಲಾಗದೆ ಒಳಗೊಳಗೆ ಅನುಭವಿಸುತ್ತಿದ್ದೆ!! ಆಫೀಸಿನ ಎಲ್ಲಾ ಬಾತ್ರೂಮ್ ಗೋಡೆಗಳಿಗೂ ನನ್ನ ನೋವಿನ ಪರಿಚಯವಿತ್ತು!! ಅತ್ತ ಆಫೀಸಿನಲ್ಲಿ ಕೆಲಸದ ಒತ್ತಡ. ಇತ್ತ ಮನೆಯಲ್ಲಿ ಅತ್ತೆಯ ನರಕ!ಕೆಲಸ ಬಿಟ್ಟು ಮನೆಯಲ್ಲಿ ಇದ್ದರೆ ಅದಕ್ಕೂ ಹಂಗಿಸುವುದು. 24 ಗಂಟೆಯೂ ಅವರೊಂದಿಗೆ ನನಗೆ ಇರಲಾಗದೆ ಕೆಲಸಕ್ಕೆ ಜೋತುಬಿದ್ದೆ!
ಯಾರಿಗಾದರೂ ಇದನ್ನು ಹೇಳಿದರೆ ಯಾರು ನಂಬುವುದಿಲ್ಲ! ಏಕೆಂದರೆ ಅತ್ತೆಯ ಆ ಜಾಣತನದ ಮಾತುಗಳು, ಮುಗ್ದತೆ(?!)ಎಲ್ಲರನ್ನು ಮರಳು ಮಾಡಿತ್ತು! ಅತ್ತೆಯ ಬಗ್ಗೆ ಎಲ್ಲರಿಗೂ ಮೃದು ಧೋರಣೆ ಇತ್ತು! ಅವರ ಈ ವ್ಯಾಘ್ರಮುಖ ನನ್ನೊಬ್ಬಳಿಗೆ ಮಾತ್ರ ಗೊತ್ತಿತ್ತು!! ತಂದೆತಾಯಿ ಒಂದು ಪಕ್ಷ ನಂಬಿದರೂ, ನೀನು ಸೊಸೆ, ಚಿಕ್ಕವಳು, ನೀನೇ ಅಡ್ಜಸ್ಟ್ ಮಾಡ್ಕೊಂಡು ಹೋಗು ಎನ್ನುವ ಮಾತುಗಳಷ್ಟೇ ಬಂದವು. ಒಟ್ಟಿನಲ್ಲಿ ಯಾರಿಗೂ ನನ್ನ ಕಷ್ಟ ಅರ್ಥವಾಗಲಿಲ್ಲ ಎಲ್ಲರ ಮನೆಯಲ್ಲಿ ಇರುವ ಅತ್ತೆ ಸೊಸೆ ಕೋಳಿ ಜಗಳದಂತೆ, ಇದೂ ಇರಬಹುದು ಎಂದು ಭಾವಿಸಿದರು.
ಅದು ಒಂದು ಅಘೋಷಿತ ನಿಯಮವಿದೆ!! ಸೊಸೆಯಾದವಳು, ಅತ್ತೆಯನ್ನು ಸಹಿಸಿಕೊಂಡು ಹೊಂದಿಕೊಂಡು ಹೋಗಬೇಕು ಎಂದು! ಅಡ್ಜಸ್ಟ್ ಅನ್ನೋದು ಕೇವಲ ಒಬ್ಬರ ಕಡೆ ಇರೋದಲ್ಲ. ಎರಡು ಕಡೆಯಿಂದ ಇರಬೇಕು!! ಏನೋ ಸಣ್ಣ ಪುಟ್ಟ ತೊಂದರೆಯಾದರೆ ಪರವಾಗಿಲ್ಲ. ಆದರೆ ನಮ್ಮ ಪ್ರಾಣನೇ ಒತ್ತೆ ಇಟ್ಟು ಇನ್ನೊಬ್ಬರಿಗೆ ಅಡ್ಜಸ್ಟ್ ಆಗೋದು ಎಂದರೆ ಮೂರ್ಖತನ!!
ಅಷ್ಟೆಲ್ಲ ಓದಿ, ಒಳ್ಳೆ ಕೆಲಸದಲ್ಲಿದ್ದು, ಕೈತುಂಬ ಸಂಬಳ ತಗೊಂಡು, ಕೆಲಸದಲ್ಲಿ ಎಷ್ಟೇ ಹೆಸರು ಗೌರವ ಗಳಿಸಿದ್ದರೂ, ಮನೆಯಲ್ಲಿ ಮಾತ್ರ ಅದ್ಯಾವುದಕ್ಕೂ ಬೆಲೆ ಇರಲಿಲ್ಲ!! ನಾಯಿ ಪಾಡಾಗಿತ್ತು. ನನ್ನ ಎಲ್ಲಾ ಆತ್ಮವಿಶ್ವಾಸವನ್ನು ಕಳೆದುಕೊಂಡೆ! ಒಂದು ದಿನ ಹೀಗೆ ಕಾರಣವಿಲ್ಲದೆ ಜಗಳ ಶುರು ಮಾಡಿದರು! ಸುಮ್ಮನೆ ಕೇಳುತ್ತಾ ಕೂತಿದ್ದವಳು ಹೋಗಿ ಅವರನ್ನು ತಬ್ಬಿಕೊಂಡು ಅತ್ತುಬಿಟ್ಟೆ!! ನಂತರ ಕಾಲಿಗೆ ಬಿದ್ದು ದಯವಿಟ್ಟು ನೆಮ್ಮದಿ ಕೊಡಿ ಎಂದು ಶರಣಾದೆ! ಅಷ್ಟು ಅಸಹಾಯಕಳಾಗಿದ್ದೆ!! ಆದರೆ ಅದು ಕಿಂಚಿತ್ತು ಅವರಿಗೆ ತಾಗಲಿಲ್ಲ!! ಮುಖದಲ್ಲಿ ಏನೋ ಗೆದ್ದ ಭಾವವಿತ್ತು!!
ಆರೋಗ್ಯ ತೀರ ಹದಗೆಡತೊಡಗಿತ್ತು. ಇಷ್ಟರಲ್ಲಿ ಆಗಲೇ ಎರಡು ಮಕ್ಕಳನ್ನು ಕಳೆದುಕೊಂಡೆ!! ಮಾನಸಿಕ ಒತ್ತಡದಿಂದ ಹೀಗೆಲ್ಲಾ ಆಗುತ್ತಿದೆ, ಹೀಗೆ ಮುಂದುವರೆದರೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಡಾಕ್ಟರ್ ಎಚ್ಚರಿಸಿದರು! ಯೋಗ, ಧ್ಯಾನಗಳ ಮೊರೆ ಹೋದೆ. ಹೀಗೆ ಒಂದು ದಿನ ಇವರಿಗೆ ಯಾಕಿಷ್ಟು ದ್ವೇಷ, ಕೋಪ ನನ್ನ ಮೇಲೆ ಎಂದು ಯೋಚಿಸುತ್ತಾ, ಅದಕ್ಕೆ ಸಂಬಂಧಿಸಿದ ಹಾಗೆ ಲೇಖನಗಳನ್ನು ಇಂಟರ್ನೆಟ್ ನಲ್ಲಿ ಓದಲು ಶುರು ಮಾಡಿದೆ! ಆಳಕ್ಕೆ ಇಳಿದು ಇನ್ನೂ ಓದುತ್ತಾ ಹೋದಂತೆ ಮನುಷ್ಯರ ವಿವಿಧ ರೀತಿಯ ಪರ್ಸನಾಲಿಟಿಗಳ ಬಗ್ಗೆ ತಿಳಿಯುತ್ತಾ ಹೋಯಿತು! ಅದರಲ್ಲಿ ಗಮನ ಸೆಳೆದಿದ್ದು “ನಾರ್ಸಿಸ್ಟ್” (Narcissism/Narcissist) ಎಂಬ ಒಂದು ಪರ್ಸನಾಲಿಟಿ!! ಅದರ ಬಗ್ಗೆ ಓದಿದಾಗ ಎಲ್ಲೋ ಒಂದು ಕಡೆ ಎಲ್ಲಾ ತಾಳೆ ಆಯಿತು!! ಈ ನಾರ್ಸಿಸ್ಟ್ ಪರ್ಸನಾಲಿಟಿಯಿಂದ(NPD) ಬಳಲುತ್ತಿದ್ದವರೊಂದಿಗೆ ಇರುವುದು ತುಂಬಾ ಕಷ್ಟ, ಅಸಾಧ್ಯ ಎಂದು ಅರ್ಥವಾಯಿತು! ಹಿಟ್ಲರ್ ಸಹ ಒಬ್ಬ ನಾರ್ಸಿಸ್ಟ್!! ಈ ಕಾಯಿಲೆಗೆ ಕೌನ್ಸಿಲಿಂಗ್ ಮಾಡಿಸಬಹುದು. ಆದರೆ ಅಂತಹವರನ್ನು ಒಪ್ಪಿಸಿ ಕರೆದುಕೊಂಡು ಹೋಗುವುದು ಸುಲಭದ ಮಾತಲ್ಲ ಎಂದು ತಿಳಿಯಿತು!!
ನಮ್ಮ ಕುಟುಂಬದೊಳಗೆ ಅಂತವರೊಬ್ಬರಿದ್ದಾಗ, ಇದೊಂದು ರೀತಿ ನುಂಗಲಾಗದ ಬಿಸಿ ತುಪ್ಪ! ಬೇರೆ ದಾರಿ ಇಲ್ಲದೆ ಅವರ ಒಟ್ಟಿಗೆ ಬದುಕಬೇಕೆಂದಾಗ, ಅವರನ್ನು ಬದಲಾಯಿಸಲು ಆಗದಿದ್ದಾಗ ನಾವೇ ಬದಲಾಗಬೇಕು!! ಇದರ ಬಗ್ಗೆ ತಿಳಿದುಕೊಂಡ ನಂತರ ನನಗೆ ಎಲ್ಲೋ ಒಂದು ಕಡೆ ಮನಸ್ಸಿಗೆ ನೆಮ್ಮದಿ ದೊರಕಿತು. ನನ್ನ ಎಲ್ಲಾ ಕಷ್ಟಗಳು ಮಾಯವಾಗಲಿಲ್ಲವಾದ್ರೂ, ನನ್ನ ಎಷ್ಟೋ ಪ್ರಶ್ನೆಗಳಿಗೆ ಉತ್ತರ ದೊರಕಿತು! ನನ್ನದೇನು ತಪ್ಪಿಲ್ಲ ಎಂಬ ಅರಿವಾಯಿತು.
ಈ ಕಾಯಿಲೆಯಿಂದ ಬಳಲುವವರಿಗೆ, ನಮ್ಮ ದುರ್ಬಲತೆಯೇ ಅವರ ಶಕ್ತಿ!! ಕಾಲು ಕೆರೆದು ಜಗಳ ಮಾಡುವುದು, ಇನ್ನೊಬ್ಬರನ್ನು ಹಂಗಿಸುವುದು, ಕೊಂಕು ನುಡಿಯುವುದು, ಇವುಗಳಿಂದ ಅವರಿಗೆ ಚೈತನ್ಯ ತುಂಬುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು! Narcissistಗಳನ್ನು ಸಮಾಧಾನ ಪಡಿಸಲು ಸಾಧ್ಯವೇ ಇಲ್ಲ. ಈಗ ಅತ್ತೆಯನ್ನು ಮೆಚ್ಚಿಸಲು ಹೋಗುವುದೇ ಇಲ್ಲ! ಕೆಲವೊಮ್ಮೆ ಅನಿಸುವುದು, ನನಗೇ ಸಿಗಬೇಕಿತ್ತಾ ಇವರು ಎಂದು!! ಹಣೆಬರಹ ಅಷ್ಟೇ! ಅದನ್ನು ಬದಲಾಯಿಸಲಾಗುವುದಿಲ್ಲ. ಇದ್ದಿದ್ದರಲ್ಲಿ ನೆಮ್ಮದಿ ಕಂಡುಕೊಂಡು ಬದುಕಬೇಕು. ಹಾಗೆಯೇ ಅವರು ಏನು ಕೊಂಕು ನುಡಿದರೂ, ಅದು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಆಚೆ ಬಿಡಬೇಕು ಎಂಬುದನ್ನು ಅರಿತಿದ್ದೇನೆ. ನನ್ನಲ್ಲಿ ಇನ್ನುಳಿದಿರುವ ಶಕ್ತಿ ನನಗೆ, ಗಂಡ, ಮಕ್ಕಳಿಗೆ ಮಾತ್ರ ಮೀಸಲು! ಅತ್ತೆಗಲ್ಲ!!
ಈಗಲೂ ಕ್ರೂರ ವ್ಯಾಘ್ರನಿರುವ ಕಾಡಿನಲ್ಲಿ ನಾನೊಂದೇ ಜಿಂಕೆ! ಈ ಜಿಂಕೆಗೆ ಈ ಕಾಡು ಬಿಟ್ಟು ಬೇರೆ ಹೋಗಲು ಸಾಧ್ಯವಿಲ್ಲ! ಹಾಗೆಯೇ ಜಿಂಕೆ ವ್ಯಾಘ್ರನಾಗಲು, ವ್ಯಾಘ್ರ ಜಿಂಕೆಯಾಗಲು ಸಾಧ್ಯವಿಲ್ಲ! ಆದರೆ ಈಗ ಹೆದರಿದ ಆ ಹರಿಣಿಯಲ್ಲ ನಾನು, ಈ ಜಿಂಕೆಗೆ ವ್ಯಾಘ್ರನಿಗೆ ಆಹಾರವಾಗದೆ ಬದುಕಲು ತಿಳಿದಿದೆ!!
*************************************
ಈ ಕಥಾನಾಯಕಿಗೆ ಅಷ್ಟೇ ಅಲ್ಲ , ಯಾವುದೇ ಹೆಣ್ಣಿಗಾದ್ರೂ ಅಷ್ಟೇ, “ಅತ್ತೆ ಅಮ್ಮನಂತೆ ಬೇಡ ಅತ್ತೆ, ಅತ್ತೆಯಂತೆ ಇದ್ದರೆ ಎಷ್ಟೋ ನೆಮ್ಮದಿ!!”.
*******************************
“ಅವರೂ ನನ್ನ ಅಮ್ಮನಂತೆ ಎಂದು ನಾನು ಭಾವಿಸಿದ್ದೆ, ಅವರೂ ನನ್ನನ್ನು ಮಗಳಂತೆ ನೋಡಿಕೊಳ್ಳಬೇಕಿತ್ತು”
#ಸಾಲುನಮ್ಮದುಬರಹನಿಮ್ಮದು ವಿಷಯಕ್ಕೆ ಬರೆದದ್ದು.
11 April 2023
#fiction #kannada