ಮಣಿ!!
ಒಂದು ಊರು. ಆ ಊರಿನ ಪಕ್ಕದಲ್ಲಿ ದೊಡ್ಡ ಕಾಡು. ಈಗ ಹೇಳ ಹೊರಟಿರುವುದು ಅಲ್ಲಿ ವಾಸವಿದ್ದ ಪುಟಾಣಿ ಮೊಲ,’ಮಣಿ’ಯ ಕಥೆ.
ಮಣಿ ತನ್ನ ತಂದೆ ತಾಯಿಯೊಂದಿಗೆ ವಾಸವಾಗಿತ್ತು. ಪುಟಾಣಿ ಮಣಿ ತುಂಬಾ ಮುದ್ದಾಗಿದ್ರು, ತುಂಟಿ ಹಠಮಾರಿ! ಯಾರ ಮಾತು ಕೇಳುತ್ತಿರಲಿಲ್ಲ. ಈಗ ಚಂಗನೆ ನೆಗೆದು ಓಡಿ ಹೋಗುವಷ್ಟು ದೊಡ್ಡದಾದ ಮೇಲಂತೂ ಅವಳ ಅಪ್ಪ ಅಮ್ಮನಿಗೆ ಅವಳನ್ನು ಹಿಡಿಯುವುದು ಕಷ್ಟವಾಗಿತ್ತು.
ತಮ್ಮ ಮಣಿ, ಬೇಟೆಗಾರರಿಗೋ ಅಥವಾ ಇನ್ಯಾವ ಪ್ರಾಣಿಗೋ ಆಹಾರವಾಗಿ ಬಿಡುತ್ತಾಳೋ ಎಂದು ಅವಳನ್ನು ಕಾಯುವುದೇ ಅವರಿಗೆ ಒಂದು ದೊಡ್ಡ ಕೆಲಸವಾಗಿತ್ತು. ಆದರೆ ಪುಟಾಣಿ ಮಣಿಗೆ ಇದರ ಪರಿವೆಯೇ ಇರಲಿಲ್ಲ. ಅವರ ಕಾಳಜಿ ಅರ್ಥವಾಗದೆ ಅಪ್ಪ-ಅಮ್ಮ ಇಬ್ಬರು ನನ್ನ ಸ್ವಾತಂತ್ರ್ಯಕ್ಕೆ ಯಾವಾಗಲೂ ಅಡ್ಡ ಪಡಿಸುತ್ತಾರೆ, ತನ್ನ ಪಾಡಿಗೆ ಇರಲು ಬಿಡುವುದಿಲ್ಲ. ನನ್ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ತಪ್ಪಾಗಿ ತಿಳಿದು ನೋವುಂಟು ಮಾಡುತ್ತಿದ್ದಳು.
ಒಂದು ದಿನ, ಸಂಜೆ ಎಷ್ಟೊತ್ತಾದರೂ ಮಣಿ ಮನೆಗೆ ಬರಲೇ ಇಲ್ಲ. ಗಾಬರಿಯಾದ ತಂದೆ ಮಣಿಯನ್ನು ಹುಡುಕಲು ಹೋದನು. ಮನೆ ಮುಂದೆ ಆಡು. ದೂರ ಹೋಗಬೇಡ ಅಂತ ಹೇಳಿದ್ದರೂ ಕಿವಿಗೆ ಹಾಕಿಕೊಳ್ಳದೆ ಎಲ್ಲಿ ಹೋದಳು ಎಂದು ಹುಡುಕುತ್ತಾ ಹೋದಾಗ, ಬಹಳ ದೂರದ ಮೈದಾನದಲ್ಲಿ ಆಟವಾಡುತ್ತಿದ್ದಳು. ಅವಳನ್ನು ನೋಡಿದ ತಕ್ಷಣ ತಂದೆಗೆ ಹೋದ ಜೀವ ಬಂದ ಹಾಗಾಯಿತು. ತಕ್ಷಣವೇ ಅವಳ ಕಿವಿ ಹಿಡಿದು,’ನಿನಗೆ ಎಷ್ಟು ಬಾರಿ ಹೇಳಿದ್ದು ಇಲ್ಲಿಗೆ ಬರಬಾರದು ಎಂದು! ತೋಳ ನರಿಗಳ ಬಾಯಿಗೆ ಆಹಾರವಾಗಬೇಕೇ?!’, ಎಂದು ಬೈಯುತ್ತಾ ಎಳೆದುಕೊಂಡು ಮನೆಗೆ ಹೋದರು. ಅಮ್ಮನೂ ಬುದ್ದಿವಾದ ಹೇಳಿದಳು. ಆದರೆ ಆಟ ತಪ್ಪಿದ್ದಕ್ಕೆ ಕೋಪದಲ್ಲಿದ್ದ ಮಣಿಗೆ ಯಾವುದು ತಲೆಗೆ ಹೋಗಲಿಲ್ಲ!
ತಿನ್ನುವ, ಓದುವ ವಿಷಯಕ್ಕೂ ಮಣಿ ಹೀಗೆ ಹಠ ಮಾಡುತ್ತಿದ್ದಳು. ಆರೋಗ್ಯಕ್ಕೆ ಹಾನಿಕಾರಕ ಹಣ್ಣು, ಎಲೆ ತಿನ್ನುತ್ತಿದ್ದಳು. ಓದಲು ನಿರಾಸಕ್ತಿ!
ಬೆಳಿಗ್ಗೆ ಮಣಿ ಎದ್ದು ಶಾಲೆಗೆ ಹೊರಡಬೇಕಾದರೆ, ಅಪ್ಪ ಅಮ್ಮ ಕರೆದು,’ಮಣಿ, ಈಗ ರೈತರು ಕ್ಯಾರೆಟ್ ಬೆಳೆಯುವ ಕಾಲ. ಶಾಲೆ ಮುಗಿದ ಮೇಲೆ ನೇರ ಮನೆಗೆ ಬರಬೇಕು. ತರ್ಲೆ ಸ್ನೇಹಿತರೊಂದಿಗೆ ಮನುಷ್ಯರು ಬೆಳೆದಿರುವ ಕ್ಯಾರೆಟ್ ತಿನ್ನಲು ಹೋಗಬೇಡ! ರೈತರು ನಮ್ಮನ್ನು ಹಿಡಿಯಲು ಬೋನ್ ಗಳನ್ನು ಇಟ್ಟಿರುತ್ತಾರೆ!’,ಎಂದು ಎಚ್ಚರಿಸಿದರು. ಇವರ ಗೋಳು ಇದ್ದಿದ್ದೆ! ಅದು ತಿನ್ನಬೇಡ, ಇದು ತಿನ್ನಬೇಡ! ಅಲ್ಲಿಗೆ ಹೋಗಬೇಡ, ಇಲ್ಲಿ ನಿಲ್ಲಬೇಡ! ಎಂದು ಗೊಣಗಿಕೊಳ್ಳುತ್ತಾ ಶಾಲೆಗೆ ಹೊರಟಳು.
ಅಂದು ಸಂಜೆ ಎಷ್ಟೊತ್ತಾದರೂ ಮಣಿ ಮನೆಗೆ ಬರಲೇ ಇಲ್ಲ. ಗಾಬರಿಯಾದ ತಂದೆ ತಾಯಿ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ, ಶಾಲೆಯ ಸ್ನೇಹಿತ, ಮಣಿ ತನ್ನ ಸ್ನೇಹಿತರೊಂದಿಗೆ ಕ್ಯಾರೆಟ್ ತಿನ್ನಲು ಹೋದಳು ಎಂದಾಗ ಮಣಿಯ ತಂದೆ ತಾಯಿಗಳಿಗೆ ಆಕಾಶವೇ ಕಳಚಿ ಬಿದ್ದ ಹಾಗೆ ಆಯಿತು! ರೈತರು ನಮ್ಮ ಮಣಿಯನ್ನು ಏನು ಮಾಡಿದರೋ! ಕೊಂದುಬಿಟ್ಟಿದ್ದರೆ?! ಸುಟ್ಟುಬಿಟ್ಟಿದ್ದರೆ?! ಎಂದು ಗಾಬರಿಯಿಂದ ಓಡಿದರು, ಊರಿನ ಕಡೆಗೆ!
ಅತ್ತ ಮಣಿ ಕ್ಯಾರಟ್ ಆಸೆಯಿಂದ ಬೋನಿನೊಳಗೆ ತನ್ನ ಸ್ನೇಹಿತರೊಂದಿಗೆ ಸಿಕ್ಕಿಹಾಕಿಕೊಂಡು ವಿಲವಿಲ ಒದ್ದಾಡುತ್ತಿದ್ದಳು, ಏನು ಮಾಡಬೇಕೆಂದು ತೋಚದೆ! ಅಪ್ಪ-ಅಮ್ಮನನ್ನು ನೆನೆಸಿಕೊಂಡು ಅಳುತ್ತಿದ್ದಳು. ಅಲ್ಲಿಗೆ ಬಂದ ರೈತನು, ಮೊಲಗಳನ್ನು ನೋಡಿ ಬಯ್ಯುತ್ತಾ,’ನನ್ನ ಕ್ಯಾರೆಟ್ಗಳನ್ನು ತಿಂದು ಹಾಳು ಮಾಡ್ತೀರಾ! ಬುದ್ಧಿ ಕಲಿಸ್ತೀನಿ! ನಾಳೆ ಸುಟ್ಟು ತಿಂದು ಹಬ್ಬ ಮಾಡುತ್ತೇವೆ’,ಎಂದು ಅವುಗಳನ್ನೆಲ್ಲ ಚೀಲದೊಳಗೆ ತುಂಬಿ ಗಂಟು ಹಾಕಿಟ್ಟು ಹೋದನು.
ಮರದ ಪೊದೆಗಳ ಸಂದಿಯಿಂದ ಇದನ್ನೆಲ್ಲಾ ಗಮನಿಸುತ್ತಿದ್ದ ಮಣಿಯ ಅಪ್ಪ ಅಮ್ಮನಿಗೆ, ಮಣಿ ಬದುಕಿರುವುದು ನೋಡಿ ಸಮಾಧಾನವಾಯಿತು. ಅಲ್ಲೇ ಕಾದು ಕುಳಿತು ರೈತ ಮಲಗಿದ ನಂತರ ಇತರ ಮೊಲಗಳೊಂದಿಗೆ ಹೋಗಿ ಚೀಲವನ್ನೆಲ್ಲ ಕಡಿದು ಹಾಕಿ ಮಣಿ ಜೊತೆ ಇತರ ಮೊಲಗಳನ್ನು ಬಿಡಿಸಿಕೊಂಡು ಮನೆಗೆ ಬಂದರು. ಸಪ್ಪೆ ಮುಖ ಹೊತ್ತು ಮಣಿ ಹಿಂದೆ ಸಾಗಿದಳು.
ಅಪ್ಪ ಅಮ್ಮ ಬೈಯ್ಯಬಹುದು, ಹೊಡೆಯಬಹುದು ಎಂದುಕೊಂಡಿದ್ದ ಮಣಿಗೆ ಅವರ ಮೌನ ನೋಡಿ ಬೇಜಾರಾಗಿ,’ ನೀವು ಹೇಳೋದನ್ನ ನಾನು ಕೇಳಬೇಕಿತ್ತು. ಆದರೆ ನಿಮ್ಮ ಬಗ್ಗೆ ತಪ್ಪು ತಿಳ್ಕೊಂಡೆ! ನೀವು ಯಾವಾಗಲು ನನಗೆ ಇಷ್ಟ ಇರೋದು ಮಾಡೋಕೆ ಬಿಡೋಲ್ಲ, ನಿಯಂತ್ರಣ ಮಾಡೋಕೆ ಬಯಸ್ತೀರಾ, ಅಂತ ತಪ್ಪು ತಿಳ್ಕೊಂಡೆ!’, ಎಂದು ತನ್ನ ತಪ್ಪಿನ ಅರಿವಾಗಿ ಸಾರಿ ಕೇಳಿದಳು.
ಆಗ ಮಣಿಯ ತಂದೆ ತಾಯಿ,’ಮಗು ಮಣಿ! ಯಾವ ತಂದೆ ತಾಯಿಯೂ ಮಕ್ಕಳಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ನಾವು ನಿನ್ನನ್ನು ಹೇಳಿದಂತೆ ಕೇಳಬೇಕು ಎಂದು ಬಯಸಿದ್ದು ನಿನ್ನ ಒಳಿತಿಗಾಗಿ ಅಷ್ಟೇ! ನೀನು ಅದನ್ನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀಯ! ನಾವು ನಿನ್ನಂತೆ ಒಂದು ಕಾಲದಲ್ಲಿ ಚಿಕ್ಕವರಾಗಿದ್ದವು. ಈಗ ದೊಡ್ಡವರಾಗಿದ್ದೇವೆ ಅಲ್ವಾ! ನಿನ್ನ ಮನಸ್ಸಿನೊಳಗೆ ಏನು ನಡೆಯುತ್ತಿರುತ್ತದೆ ಎಂಬುದನ್ನು ಊಹಿಸಬಲ್ಲೆವು! ಚಿಕ್ಕವರಿದ್ದಾಗ ಬುದ್ಧಿ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಒಳ್ಳೆಯದು ಕೆಟ್ಟದು ಯಾವುದು ತಿಳಿದಿರುವುದಿಲ್ಲ. ಲೋಕದ ಜ್ಞಾನ ಇರುವುದಿಲ್ಲ, ಮನಸ್ಸಿಗೆ ಬಂದಂತೆ ಮಾಡುತ್ತೇವೆ. ಆಗ ತೊಂದರೆಗೆ ಸಿಕ್ಕಿ ಕೊಳ್ಳುತ್ತೇವೆ. ಅದಕ್ಕಾಗಿ ನಮಗೆ ಸರಿಯಾದ ದಾರಿ ತೋರಲು, ತಿದ್ದಲು ಮನೆಯಲ್ಲಿ ತಂದೆ,ತಾಯಿ,ಹಿರಿಯರು ಎಂದು ಇರುವುದು. ಉದಾಹರಣೆಗೆ ನಾನು ಒಂದು ದಾರಿಯಲ್ಲಿ ಹೋಗುತ್ತಿರುತ್ತೇನೆ. ಅಲ್ಲಿ ಮುಳ್ಳು ಬಿದ್ದಿರುತ್ತದೆ. ಮುಳ್ಳಿನ ಮೇಲೆ ಕಾಲಿಟ್ಟಾಗ ನನಗೆ ನೋವಾಗುತ್ತದೆ. ಅದರಿಂದ ನನ್ನ ಹಿಂದೆ ಬರುವವರಿಗೆ ನಾನು ಅದನ್ನು ಮಾರ್ಗದರ್ಶನ ಮಾಡಿ ಹೇಳುತ್ತೇನೆ, ಅಲ್ಲಿ ಮುಳ್ಳಿದೆ ಎಚ್ಚರಿಕೆಯಿಂದ ಬನ್ನಿ ಎಂದು! ಅಂದರೆ ನಮ್ಮ ಜೀವನದ ಅನುಭವಗಳಿಂದ ನಿನಗೆ ನಾವು ಬುದ್ಧಿ ಹೇಳುತ್ತೇವೆ ಹೊರತು ಇನ್ಯಾವ ಬೇರೆ ಉದ್ದೇಶದಿಂದಲ್ಲ!’, ಎಂದರು.
ಮಣಿಗೆ ಬುದ್ಧಿ ಬಂದಿತ್ತು. ಮತ್ತೊಮ್ಮೆ ಕ್ಷಮೆ ಕೇಳಿ ನಾನು ದೊಡ್ಡವಳಾಗುವವರೆಗೂ ನಿಮ್ಮ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದು ಇಬ್ಬರನ್ನು ಅಪ್ಪಿಕೊಂಡಳು.